ಮುದ್ದೇಬಿಹಾಳ: ರಾಜ್ಯ ಸರ್ಕಾರ ಮೇ 10ರಿಂದ 24ರವರೆಗೆ ಎರಡು ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆ ಪಟ್ಟಣದಲ್ಲಿ ಸಂಚರಿಸುವ ನಿರ್ಗತಿಕರು, ಬಡವರು ಹಾಗೂ ಭಿಕ್ಷುಕರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಊಟದ ಪೊಟ್ಟಣ ನೀಡುವ ಕಾರ್ಯಕ್ಕೆ ಇಲ್ಲಿನ ಮಹೆಬೂಬ ನಗರದ ಮಕ್ಕಾ ಮಸೀದಿ ಕಮಿಟಿ ಮುಂದಾಗಿದೆ.
ಹಸಿವಿನಿಂದ ಅನ್ನ ಕೊಡಿ ಎಂದು ಬಂದವರೇ ಪ್ರೇರಣೆ:
ಜನತಾ ಕರ್ಫ್ಯೂ ವೇಳೆ ಎರಡು ದಿನಗಳ ಹಿಂದೆ ನಮ್ಮ ಸಮಾಜದ ಮುಖಂಡ ರಸೂಲ್ ದೇಸಾಯಿ ಅವರ ಮನೆಗೆ ಹಸಿವು ಎಂದು ಊಟ ಬೇಡಿಕೊಂಡು ಹತ್ತು ಜನ ಬಂದಿದ್ದರು. ಆಗ ದೇಸಾಯಿ ಅವರು ಮನೆಯಲ್ಲಿ ಮಾಡಿದ್ದ ಅಡುಗೆಯನ್ನೇ ದಾನ ಮಾಡಿದರು. ಅದರಿಂದ ಪ್ರೇರಿತರಾದ ಮಸೀದಿಯ ಕಮಿಟಿಯವರು ಕೂಡಲೇ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆಂದು ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ತಿಳಿಸಿದರು.
ಪಟ್ಟಣದ ಇಂದಿರಾ ಸರ್ಕಲ್‌ನಲ್ಲಿ ಸೋಮವಾರ ಈ ಮಾನವೀಯ ಕಾರ್ಯಕ್ಕೆ ಚಾಲನೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂ.ಬಿ.ನಾವದಗಿ ಮಾತನಾಡಿ, ರಂಜಾನ್ ಹಬ್ಬದ ಸಮಯದಲ್ಲಿ ತಾವು ಉಪವಾಸವಿದ್ದರೂ ಹಸಿದವರ ಹೊಟ್ಟೆ ತುಂಬಿಸಲು ಈ ಕಾರ್ಯಕ್ಕೆ ಮುಂದಾಗಿರುವ ಕಮಿಟಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 15,913 ಜನರಿಗೆ ಕೊರೊನಾ ದೃಢ: ಹೊಸ ಸೋಂಕು ಪ್ರಕರಣಗಳು ಇಳಿಕೆ
ಪುರಸಭೆ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ಅಂಗಡಿಗಳು ಬಂದ್ ಇರುತ್ತವೆ. ಈ ಸಮಯದಲ್ಲಿ ಅಸಹಾಯಕರಿಗೆ, ಹಸಿದವರಿಗೆ ನೆರವಾಗಲು ಲಾಕ್‌ಡೌನ್ ಅವಧಿ ಮುಗಿಯುವವರೆಗೂ ಈ ಉಚಿತ ಊಟ ಕೊಡುವ ಮಾನವೀಯ ಕೆಲಸವನ್ನು ನಮ್ಮ ಕಮಿಟಿಯ ವತಿಯಿಂದ ಮಾಡುತ್ತಿದ್ದೇವೆ. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ, ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಆಹಾರದ ಪೊಟ್ಟಣ ವಿತರಿಸಲಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಪಟ್ಟಣ ಪ್ರದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಮಹತ್ವದ ಕಾರ್ಯ ಕೈಗೊಂಡಿರುವ ಮೆಕ್ಕಾ ಮಸಿದಿ ಕಮಿಟಿ ಆಡಳಿತ ಮಂಡಳಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಹಾಯವಾಣಿ:
ಮುದ್ದೇಬಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲಿಯಾದರು ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರು, ಅಸಹಾಯಕರು ಕಂಡರೆ ಅಂತವಹರಿಗೆ ಆಹಾರ ಪೂರೈಸಲು ಕಮಿಟಿ ಸದಸ್ಯರು ಸಿದ್ಧರಾಗಿದ್ದಾರೆ. ಅವರಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಆಹಾರ ಪೂರೈಸುವರು. ಅದಕ್ಕಾಗಿ ಸಹಾಯವಾಣಿ ಸಂಖ್ಯೆ 9902219466, 9845442289ಕ್ಕೆ ಸಂಪರ್ಕಿಸುವಂತೆ ಮೆಕ್ಕಾ ಮಸೀದಿ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.