ಮುದ್ದೇಬಿಹಾಳ (ವಿಜಯಪುರ) : ಕೊರೊನಾ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ದುಡಿಸಿಕೊಂಡು ಯಾವುದೇ ವಿಶೇಷ ಅನುದಾನ ನೀಡದೇ ಇರುವುದರಿಂದ ತುತ್ತು ಕೂಳಿಗೂ ಕಾರ್ಯಕರ್ತೆಯರು ಪರದಾಟ ಅನುಭವಿಸುವಂತಾಗಿದೆ ಎಂದು ಅಂಗನವಾಡಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ನೀಲಮ್ಮ ಪಾಟೀಲ್ ಹೇಳಿದರು.
ತಾಳಿಕೋಟಿ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಕಾರ್ಯಕರ್ತೆಯರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿನಿಂದ ಬರಬೇಕಾದ ಬಾಕಿ ವೇತನ ನೀಡುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿಸಿರುವ ವೇತನ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡುವುದು, ಮೊಟ್ಟೆಯ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತೆಯರ ವೇತನ ಹೆಚ್ಚಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಹಣ ಕೈಸೇರಿಲ್ಲ. ಅಂಗನವಾಡಿ ಕಾರ್ಯಕರ್ತೆಯರನ್ನು ಕೋವಿಡ್-19 ವಾರಿಯರ್ಸ್ ಎಂದು ಪರಿಗಣಿಸಬೇಕು. ವಿವಿಧ ಕೆಲಸಗಳನ್ನು ಮಾಡಿಸಿಕೊಂಡಿದ್ದರೂ ಯಾವುದೇ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ನೌಕರರ ಮೇಲೆ ಶೋಷಣೆ ಹೆಚ್ಚುತ್ತಿದ್ದು ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.