ವಿಜಯಪುರ: ಭೀಮಾ ನದಿ ಸಮಸ್ಯೆಯನ್ನು ಬಗೆ ಹರಿಸಲು ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ಅದರಂತೆ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದದ ಜಿಲ್ಲೆಯ ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು. ಕೃಷ್ಣಾ ಕೊಳ್ಳದ ಯೋಜನೆಗಳು ಪೂರ್ಣಗೊಳ್ಳಲು 1 ಲಕ್ಷ ಕೋಟಿ ರೂ. ಹಣ ಬೇಕು, ರಾಜ್ಯ ಸರ್ಕಾರ ಒಂದೇ ಇಷ್ಟೊಂದು ಮೊತ್ತದ ಹಣ ಭರಿಸಲು ಅಸಾಧ್ಯವಾದ ಕೆಲಸ. ಈಗಾಗಲೇ ಅನೇಕ ರೈತರು ತ್ಯಾಗ ಮಾಡಿದ್ದಾರೆ, ಅವರ ಬದುಕು ಇನ್ನೂ ಹಸನಾಗಿಲ್ಲ ಕೃಷ್ಣಾ ಕೊಳ್ಳದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡದೇ ಇದ್ದರೆ ಯೋಜನೆ ಪೂರ್ಣಗೊಳ್ಳುವುದು ಕನಸಿನ ಮಾತು ಎಂದಿದ್ದಾರೆ.
ಅಲ್ಲದೆ ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮ ಸರ್ಕಾರವೇ ಇದೆ. ಇದು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಬಿಡಿ, ಆಗ ಜನರೇ ನಿಮ್ಮನ್ನು ಸ್ಮರಿಸುತ್ತಾರೆ. ಈ ಕೆಲಸ ಮಾಡಿದರೆ ಪಕ್ಷಾತೀತವಾಗಿ ಅಭಿನಂದಿಸುವೆ. ಬಹಳ ದಿನಗಳಿಂದ ಕೇಂದ್ರ ಹಾಗು ರಾಜ್ಯದಲ್ಲಿ ಒಂದೇ ಸರ್ಕಾರವಿದೆ. ಈ ಕುರಿತು ಗಂಭೀರವಾಗಿ ಯೋಚಿಸಿ ಎಂದು ಸಲಹೆ ನೀಡಿದರು.
ಉಳಿದ ಉಪನದಿಗಳಿಗೂ ಗೌರವ ದೊರಕಲಿ:
ಕೃಷ್ಣೆ ಹಾಗೂ ಕಾವೇರಿ ನಾಡಿನ ಎರಡು ಕಣ್ಣುಗಳು. ಈ ಎರಡೂ ನದಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಗೌರವ ಉಳಿದ ಉಪನದಿಗಳಿಗೂ ದೊರಕಬೇಕು ಎಂಬುದು ನನ್ನ ಆಶಯ. ಎಲ್ಲ ಉಪನದಿಗಳ ಯೋಜನೆಗಳಿಗೂ ಆದ್ಯತೆ ದೊರಕಬೇಕಿದೆ ಎಂದರು.
ಭೀಮಾ ನದಿ ಸಮಸ್ಯೆಯಂತೂ ವ್ಯಾಪಕವಾಗಿದೆ. ನಮಗೆ ನೀರು ಬೇಕಾದರೆ ಅವರು ಕೊಡುವುದಿಲ್ಲ, ಆದರೆ ಪ್ರವಾಹ ಸಂದರ್ಭದಲ್ಲಿ ನಮಗೆ ಮುನ್ಸೂಚನೆ ನೀಡಿದರೆ ನೀರು ಹರಿಸುತ್ತಾರೆ, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಲ್ಭಣಿಸುತ್ತಿದೆ. ನಮ್ಮ ಹಾಗೂ ಅವರ ಸಮನ್ವಯತೆಯ ಕೊರತೆ ಇದೆ. ನೀರು ಹರಿಸುವ ನಿಟ್ಟಿನಲ್ಲಿ ಎರಡೂ ಸರ್ಕಾರಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ವಿಜಯಪುರ ಜಿಲ್ಲೆಗೆ ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಪ್ರಕಟಿಸಿದರು. ಇನ್ನೂ ದಿನಾಂಕ ನಿಗದಿಯಾಗಿಲ್ಲ, ಆದರೆ ಅಕ್ಟೋಬರ್ 4 ಅಥವಾ 5 ರಂದು ಮುಖ್ಯಮಂತ್ರಿಗಳು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ, ಪ್ರಗತಿಯ ವರದಿಯೊಂದಿಗೆ ಅಗತ್ಯ ಅಂಕಿ ಅಂಶಗಳೊಂದಿಗೆ ಸಭೆಗೆ ಹಾಜರಾಗಬೇಕು. ನಿರ್ಲಕ್ಷ್ಯ ತೋರುವ ಹಾಗೂ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರದಿಂದ ಹಣ ಬಿಡುಗಡೆ ಮಾಡಿ:
ವಿಜಯಪುರ ಜಿಲ್ಲೆಯಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ ಕೇಂದ್ರದಿಂದ ಒಂದೇ ಒಂದು ರೂ. ಹಣ ಬಿಡುಗಡೆಯಾಗಿಲ್ಲ. ಜನರು ಈ ಬಗ್ಗೆ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿ. ಸಂಸದರು ಹಾಗೂ ಸಚಿವರು ಮೊದಲು ಈ ವಿಷಯದ ಬಗ್ಗೆ ಆದ್ಯತೆ ನೀಡಿ ಹಣ ಬಿಡುಗಡೆಯಾಗುವಂತೆ ಮಾಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಭೆಯಲ್ಲಿ ಸಿ.ಸಿ. ಪಾಟೀಲರಿಗೆ ಮನವಿ ಮಾಡಿಕೊಂಡರು.