ವಿಜಯಪುರ: ಕುಡಿದ ಮತ್ತಿನಲ್ಲಿ ಹೊಂಡಕ್ಕೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಮಲಘಾಣ ಮಧ್ಯೆ ನಡೆದಿದೆ. ಮಸೂತಿ ಗ್ರಾಮದ ಮುತ್ತಪ್ಪ ಅಲಿಯಾಸ್ ಯಂಕಪ್ಪ ಲಕ್ಷ್ಮಣ ಕರಾಡೆ (36) ಮೃತ ದುರ್ದೈವಿ.
ಸ್ನೇಹಿತನ ಜೊತೆ ಮಸೂತಿ ಗ್ರಾಮದ ಸಮೀಪದ ಮಲಘಾಣ ತಾಂಡಾದಲ್ಲಿ ಸಾರಾಯಿ ಕುಡಿದು ಬರುವಾಗ ಈ ಘಟನೆ ನಡೆದಿದೆ. ಮಾರ್ಗದ ಮಧ್ಯೆದಲ್ಲಿ ಸೇತುವೆಯೊಂದರ ಮೇಲೆ ಕುಳಿತಾಗ ಆಯತಪ್ಪಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಗೆಳೆಯ ಹೊಂಡಕ್ಕೆ ಬಿದ್ದಿದ್ದನ್ನು ನೋಡಿ ಸ್ನೇಹಿತ ಪರಸಪ್ಪ ಸಂಗಪ್ಪ ಚಲವಾದಿ ರಕ್ಷಣೆಗೆ ಮುಂದಾಗಿದ್ದ. ಆದರೆ, ಮುತ್ತಪ್ಪ ಕರಾಡೆಯನ್ನು ಹೊಂಡದಿಂದ ಹೊರ ತೆಗೆಯಲು ಸಾಧ್ಯವಾಗದ್ದರಿಂದ ಪರಸಪ್ಪ ಮನೆಯತ್ತ ತೆರಳಿದ್ದನು.
ಯಾರಿಗೂ ಈ ವಿಷಯ ತಿಳಿಸದ ಪರಸಪ್ಪ, ಮನೆಗೆ ಹೋಗಿ ನಿದ್ದೆಗೆ ಜಾರಿದ್ದನು. ಬೆಳಿಗ್ಗೆ ಹೊಂಡದಲ್ಲಿ ಮುಳುಗಿದ್ದ ಮೃತದೇಹ ಹೊರ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲ್ಹಾರ ತಾಲೂಕಿನ ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.