ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ನೇತೃತ್ವದ ವಿಶೇಷ ತಜ್ಞರ ಸಮಿತಿ ನಗರದ ನೇಮಿಗೌಡ್ ಆಸ್ಪತ್ರೆಗೆ ಭೇಟಿ ನೀಡಿ ಡೆತ್ ಆಡಿಟ್ ಕುರಿತು ಪರಿಶೀಲನಾ ಸಭೆ ನಡೆಸಿದೆ.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲಾ ಸಾವುಗಳನ್ನು, ಸಾವು ಸಂಭವಿಸಿದ ದಿನವೇ ವರದಿ ಮಾಡಲು ಸೂಚಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ತೀವ್ರತರದ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ, ಸಾವಿನ ಪ್ರಮಾಣ ಕಡಿಮೆ ಮಾಡಲು ತಿಳಿಸಲಾಗಿದೆ. ಆಕ್ಸಿಜನ್ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲು ಕೂಡಾ ಸೂಚಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ಮೇ 17ರಂದು 25 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿತ್ತು. ಮೇ 18 ರಂದು ಮೂರು ಹೊಸ ಪ್ರಕರಣಗಳು ಕಂಡುಬಂದಿವೆ. ರೋಗನಿರೋಧಕ ಶಕ್ತಿ ಕಡಿಮೆಯಾದ ವ್ಯಕ್ತಿಗಳಲ್ಲಿ ಇದು ಕಂಡು ಬರುತ್ತಿದೆ. ಇಲ್ಲಿಯವರೆಗೆ ದಾಖಲಾದ ಹೆಚ್ಚಿನ ರೋಗಿಗಳು ಬಿ. ಎಲ್.ಡಿ.ಇ ವೈದ್ಯಕೀಯ ವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಲು ಸೂಚಿಸಲಾಗಿದೆ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಲ್ಲಾ ತರಹದ ಕೇಸ್ಗಳನ್ನು ನೋಡಲು ನುರಿತ ತಜ್ಞ ವೈದ್ಯರ ತಂಡ ಲಭ್ಯವಿರುವುದರಿಂದ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದು ಡೀಸಿ ತಿಳಿಸಿದರು.