ವಿಜಯಪುರ: ಆಲಮಟ್ಟಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ಮೊಸಳೆ ದಾಳಿಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಯನೆಗಲಿ ಗ್ರಾಮದ 60 ವರ್ಷದ ಯಮನಪ್ಪ ಕಟಬರ ಮೊಸಳೆ ದಾಳಿಗೆ ಬಲಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ನಾಯನೆಗಲಿ ಸಮೀಪದ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ನದಿಯ ಮಧ್ಯ ಭಾಗದಲ್ಲಿ ಬಲೆ ಹಾಕುವ ಸಮಯದಲ್ಲಿ ಯಮನಪ್ಪ ಮೇಲೆ ಮೊಸಳೆ ದಾಳಿ ನಡೆಸಿದೆ. ಮೊಸಳೆ ದಾಳಿಗೆ ಯಮನಪ್ಪ ಸಾವನ್ನಪ್ಪಿದ್ದಾನೆ.
ಮೀನು ಹಿಡಿಯಲು ಹೋದ ವ್ಯಕ್ತಿ ಮನೆಗೆ ವಾಪಸಾಗದ ಹಿನ್ನೆಲೆ ಕುಟುಂಬಸ್ಥರು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು, ಮಾಹಿತಿ ಆಧರಿಸಿ ಕೃಷ್ಣಾ ನದಿಯಲ್ಲಿ ಬುಧವಾರ ಪರಿಶೀಲನೆ ನಡೆಸಿದ್ದರು. ಈ ವೇಳೆ ವ್ಯಕ್ತಿಯೊಬ್ಬರ ಕೈ ಮತ್ತು ಕಾಲುಗಳು ಆಲಮಟ್ಟಿ ಕೃಷ್ಣಾ ಸೇತುವೆ ಕೆಳಗೆ ಪತ್ತೆಯಾಗಿತ್ತು.
ಪತ್ತೆಯಾಗಿದ್ದ ಕೈ ಮತ್ತು ಕಾಲುಗಳು ಮೃತ ಮೀನುಗಾರ ಯಮನಪ್ಪ ಕಟಬರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.