ವಿಜಯಪುರ: ಜಿಲ್ಲೆಯಲ್ಲಿ ಜನರನ್ನು ಬೆಚ್ಚಿ ಬೀಳಿಸುವ ಮಹಿಳೆಯ ಕೊಲೆ ನಡೆಇದೆ. ಕಳೆದ ರಾತ್ರಿ ಜಿಲ್ಲೆಯ ಇಂಡಿ ಪಟ್ಟಣದ ರೇವಪ್ಪ ಮಡ್ಡಿಯಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ (Woman Murder) ಮಾಡಲಾಗಿದೆ. ಕೊಲೆಯಾದ ಮಹಿಳೆಯನ್ನು ರೇಣುಕಾ ವಾಘ್ಮೋರೆ (40) ಎಂದು ಗುರುತಿಸಲಾಗಿದೆ. ಹರಿತವಾದ ಆಯುಧಗಳಿಂದ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.
ಇನ್ನು ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಆದರೆ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಅಗ್ನಿ ಅವಘಡ: ಆಕಸ್ಮಿಕ ಅಗ್ನಿ ಅವಘಡದಿಂದ ಚಪ್ಪಲಿ ಅಂಗಡಿ ಸುಟ್ಟು ಭಸ್ಮಗೊಂಡಿರುವ ಘಟನೆ ವಿಜಯಪುರ ನಗರದ ಸರಾಫ್ ಬಜಾರ್ ಬಳಿ ಇಂದು ಬೆಳಗ್ಗೆ ನಡೆದಿದೆ. ಬೆಳ್ಳಂಬೆಳಗ್ಗೆ ಇಲ್ಲಿನ ಫುಟ್ವೇರ್ ಶಾಪ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಲೇ ಬೆಂಕಿ ಸಂಪೂರ್ಣ ಅಂಗಡಿಗೆ ಆವರಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಶಾಪ್ನಲ್ಲಿದ್ದ ಫುಟ್ವೇರ್ಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮಗೊಂಡವು.
ಇನ್ನು ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಅಗ್ನಿ ಅನಾಹುತದಿಂದ ಎಷ್ಟು ನಷ್ಟವಾಗಿದೆ ಎಂಬುದು ಅಂದಾಜಿಗೆ ಸಿಕ್ಕಿಲ್ಲ. ಗಾಂಧಿಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ: ಹೆತ್ತ ತಾಯಿ ಕೊಂದು ಸೂಟ್ ಕೇಸ್ನಲ್ಲಿ ಶವ ತಂದು ಪೊಲೀಸರಿಗೆ ಶರಣಾದ ಮಗಳು
ಕಲಬುರಗಿಯಲ್ಲಿ ಭೀಕರ ಕೊಲೆ: ಕ್ಷುಲ್ಲಕ ಕಾರಣಕ್ಕಾಗಿ 6 ಜನರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬರ್ಬರವಾಗಿ ಇರಿದು ಯುವಕನೊಬ್ಬನ ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಅಜಾದಪೂರ ಮಾರ್ಗದ ಹುಂಡೇಕಾರ ಕಾಲೋನಿಯಲ್ಲಿ ಜೂನ್ ಮೊದಲನೇ ವಾರದಲ್ಲಿ ನಡೆದಿತ್ತು.
ಮಿಲನ್ ನಗರದ ಬಂದೇನವಾಜ್ ಮಜೀದ್ ಹತ್ತಿರದ ನಿವಾಸಿ ಬಾಬಾಖಾನ್ ತಂದೆ ಸಿರಾಜ (26) ಎಂಬಾತನೇ ಕೊಲೆಯಾಗಿದ್ದು, ಇದೇ ಬಡಾವಣೆಯ ನಿವಾಸಿಗಳಾದ ಇಬ್ರಾಹಿಮ್ ತಂದೆ ಇಮಾಮಾಲಿ (25) ಹಾಗೂ ಮೊಯೀನ್ ಹಲ್ಲೆಗೊಳಾಗಿದ್ದರು. ಬಳಿಕ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರಿಬ್ಬರು ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಹುಂಡೇಕಾರ ಕಾಲೋನಿಯ ನಿವಾಸಿ ಸೈಫನ್ ಅಲಿಖಾನ, ಈತನ ತಂದೆ ಶೌಕತ್ ಹಾಗೂ ಮೂವರು ಸಹೋದರರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಶೋಧ ಕೈಗೊಳ್ಳಲಾಗಿದೆ ಅಂತಾ ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಬಾಬಾಖಾನ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅವರು ತಮ್ಮ ವಿಧಿವಿಧಾನಗಳ ಪ್ರಕಾರ ಬಾಬಾಖಾನ್ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಲೆಯಾದ ಬಾಬಾಖಾನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.