ವಿಜಯಪುರ : ಉತ್ತರ ಕರ್ನಾಟಕದ ವೃತ್ತಿರಂಗಭೂಮಿಗೆ ಕೋವಿಡ್ ಕರಿ ನೆರಳು ಬಿದ್ದಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಾಟಕ ಕಲಾವಿದರ ಮೇಲೆ ಭಾರಿ ಪರಿಣಾಮ ಬೀರಿದೆ.
ಉತ್ತರ ಕರ್ನಾಟಕದಲ್ಲಿ ಬರುವ ಪ್ರಸಿದ್ಧ ಜಾತ್ರೆಗಳಲ್ಲಿ ಹೆಚ್ಚಾಗಿ ನಾಟಕ ಪ್ರರ್ದಶನಗೊಳ್ಳುತ್ತಿದ್ದವು. ಆದರೆ, ಈಗ ಜಾತ್ರೆಗಳು ರದ್ದಾದ ಕಾರಣ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಜಯಪುರದ ಸ್ಟೇಶನ್ ರಸ್ತೆಯಲ್ಲಿರುವ ವೃತ್ತಿರಂಗಭೂಮಿ ನಾಟಕ ಕಂಪನಿಯೊಂದರಲ್ಲಿ 20ಕ್ಕೂ ಹೆಚ್ಚು ಕಲಾವಿದರು ನಾಟಕ ಮಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡಿ ಬದುಕು ಕಟ್ಟಿಕೊಳ್ಳುತ್ತಿದ್ದರು.
ಕಳೆದ ಒಂದು ತಿಂಗಳಿಂದ ವಿವಿಧ ಜಿಲ್ಲೆಯ ನಾಟಕ ಕಂಪನಿಗಳು ನಗರಕ್ಕೆ ಆಗಮಿಸಿ ಟೆಂಟ್ ಹಾಕಿವೆ. ಹೊಸ ವರ್ಷಾಚರಣೆ ಹಾಗೂ ವಿಜಯಪುರದ ಸುಪ್ರಸಿದ್ಧ ಶ್ರೀ ಸಿದ್ದೇಶ್ವರ ಜಾತ್ರೆ ವೇಳೆ ಉತ್ತಮ ಆದಾಯ ಪಡೆಯಬಹುದು ಎಂದು ಆಶಾಭಾವನೆ ಹೊಂದಿದ್ದರು ಕಲಾವಿದರು. ಆದರೆ, ಕೋವಿಡ್ ಕಲಾವಿದರಿಗೆ ಶಾಪವಾಗಿ ಪರಿಣಮಿಸಿದೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕಾರಣದಿಂದಾಗಿ ರಾತ್ರಿ ಪ್ರದರ್ಶನ ಬಂದ್ ಆಗಿದೆ. ದಿನಕ್ಕೆ ಕೇವಲ ಒಂದು ಪ್ರದರ್ಶನ ಮಾತ್ರ ನೀಡಲಾಗುತ್ತಿದೆ. ಅಲ್ಲದೇ ಸಿದ್ದೇಶ್ವರ ಜಾತ್ರೆ ರದ್ದು ಮಾಡಿದ ಕಾರಣ ಕಲಾವಿದರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಮಾನ್ಯವಾಗಿ ಒಂದು ನಾಟಕ ಕಂಪನಿಯಲ್ಲಿ 25 ರಿಂದ 30 ಕಲಾವಿದರು ಕೆಲಸ ಮಾಡುತ್ತಾರೆ. ಮಹಿಳಾ ಕಲಾವಿದರಿಗೆ ದಿನಕ್ಕೆ ಒಂದು ಸಾವಿರ, ಪುರುಷ ಕಲಾವಿದರಿಗೆ 800 ರೂ. ಸಂಬಳ ನೀಡಲಾಗುತ್ತದೆ. ಜಾಗದ ಬಾಡಿಗೆ, ಕರೆಂಟ್ ಬಿಲ್ ಸೇರಿ ಉಳಿದ ಖರ್ಚು ಸೇರಿ ಪ್ರತಿ ದಿನ 15 ರಿಂದ 16 ಸಾವಿರ ಖರ್ಚಾಗುತ್ತದೆ. ಆದರೆ, ಪ್ರೇಕ್ಷಕರ ಕೊರತೆಯಿಂದಾಗಿ ದಿನಕ್ಕೆ 5,000 ರೂ. ಕೂಡ ಸಿಗೋದು ಕಷ್ಟವಾಗಿದೆ. ಹೀಗಾದ್ರೆ, ರಂಗಭೂಮಿ ಉಳಿಯುವುದು ಹೇಗೆ ಅನ್ನೋ ಆತಂಕ ಎದುರಾಗಿದೆ.
ಇದನ್ನೂ ಓದಿ: Congress Mekedatu padayatra: 4 ಕಿ.ಮೀ ನಡೆಯುಷ್ಟರಲ್ಲಿ ಸಿದ್ದರಾಮಯ್ಯಗೆ ಸುಸ್ತು, ಕಾರಿನಲ್ಲಿ ವಾಪಸ್
ನೈಟ್ ಕರ್ಫ್ಯೂ ಮುನ್ನ ಪ್ರತಿ ದಿನ 200 ಪ್ರೇಕ್ಷಕರು ಆಗಮಿಸುತ್ತಿದ್ದರು. ಆದರೆ, ಇದೀಗ 30 ರಿಂದ 50 ಪ್ರೇಕ್ಷಕರು ಮಾತ್ರ ಬರುತ್ತಿದ್ದಾರೆ. ನಷ್ಟದಲ್ಲೇ ನಾಟಕ ಪ್ರದರ್ಶನ ಮಾಡುವಂತಾಗಿದೆ. ಹೀಗಾಗಿ, ಸರ್ಕಾರ ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದು ಕಲಾವಿದರು ಮನವಿ ಮಾಡಿದ್ದಾರೆ.
ಸದ್ಯ ವೀರೇಶ್ವರ ನಾಟ್ಯ ಸಂಘದವರು ಪ್ರತಿ ದಿನ 14 ರಿಂದ 16 ಸಾವಿರದಷ್ಟು ಖರ್ಚು ಮಾಡಿ ನಾಟಕ ಏರ್ಪಾಡು ಮಾಡಿದರೂ ಅದರ ಅರ್ಧದಷ್ಟು ಸಹಿತ ಟಿಕೆಟ್ ಕಲೆಕ್ಷನ್ ಆಗದೇ ಕಂಗಾಲಾಗಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಕರೆದೊಯ್ದು, ರಾತ್ರಿ ವೇಳೆ ಟೆಂಟ್‌ನಲ್ಲಿಯೇ ಮಲಗುವ ಕಲಾವಿದರ ಪರಿಸ್ಥಿತಿ ಹೇಳ ತೀರದಾಗಿದೆ. ಸರ್ಕಾರ ಇಂತಹ ಕಲಾವಿದರ ನೆರವಿಗೆ ಬರಬೇಕಿದೆ.