ವಿಜಯಪುರ: ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು ಮಗ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿಯ ಗಂಗನಗೌಡ ಹನಮಗೌಡ ಗೌಡರ ಹಾಗೂ ಮಂಜುನಾಥ ಯಲಗೂರದಪ್ಪ ಗೌಡರ ಶಿಕ್ಷೆಗೊಳಗಾದವರು.
ಘಟನೆಯ ವಿವರ: ಗಂಗನಗೌಡ ಗೌಡರ ತನ್ನ ತಾಯಿ ಅದೇ ಗ್ರಾಮದ ತಮ್ಮಣ್ಣ ಸಂಗಪ್ಪ ಮೋರ್ಕಿ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯ ವ್ಯಕ್ತಪಡಿಸಿದ್ದನು. ಹೇಗಾದರೂ ಮಾಡಿ ತಮ್ಮಣ್ಣನನ್ನು ಕೊಲೆ ಮಾಡಬೇಕೆಂದು ದ್ವೇಷ ಸಾಧಿಸಿ ತನ್ನ ಜತೆ ಸ್ನೇಹಿತ ಮಂಜುನಾಥ ಗೌಡರನನ್ನು ಸೇರಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ. 2019ರ ಅಕ್ಟೋಬರ್ 13 ರಂದು ಸಂಜೆ 6 ಗಂಟೆ ಸುಮಾರಿಗೆ ತಮ್ಮಣ್ಣ ಮೋರ್ಕಿ ಹಡಲಗೇರಿ ಗ್ರಾಮದ ದ್ಯಾಮವ್ವನ ದೇವಸ್ಥಾನ ಹತ್ತಿರ ಹೋಗುತ್ತಿದ್ದಾಗ ಹೊಂಚು ಹಾಕಿದ್ದ ಗಂಗನಗೌಡ ಗೌಡರ ಹಿಂಬದಿಯಿಂದ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ತಮ್ಮಣ್ಣ ದೇವಸ್ಥಾನ ಮೆಟ್ಟಿಲೇರಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.
ಅಷ್ಟಕ್ಕೆ ಬಿಡದೇ ಆತನ ಮೇಲೆ ಚಾಕುವಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದನ್ನು ಬಿಡಿಸಲು ಬಂದ ತಮ್ಮಣ್ಣನ ಪತ್ನಿ ಹಾಗೂ ಮಗನಿಗೆ ಜೀವ ಬೆದರಿಕೆ ಹಾಕಿದ್ದರು. ತೀವ್ರ ರಕ್ತಸ್ರಾವದಿಂದ ತಮ್ಮಣ್ಣ ಮೋರ್ಕಿ ಸಾವನ್ನಪ್ಪಿದ್ದ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗನಗೌಡ ಗೌಡರ ಹಾಗೂ ಮಂಜುನಾಥ ಗೌಡರ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಹಾಗೂ ಒಂದು ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ನಿಂದಿಸಿದರೆಂದು ರುಬ್ಬುವ ಕಲ್ಲಿನಿಂದ ತಂದೆಯನ್ನೇ ಹೊಡೆದು ಕೊಂದ ಮಗ!