ವಿಜಯಪುರ: ಈ ದೇಶದ ಮಣ್ಣಿನ ಗುಣದಲ್ಲಿ ಸರ್ವಾಧಿಕಾರ ಆಡಳಿತವಿಲ್ಲ. ಭಾರತಮಾತೆ ಇದನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಮೊದಲು ತ್ರಿವಲ್ ತಲಾಕ್ ರದ್ದತಿ ಆಯಿತು, ಅನಂತರ ಕಾಶ್ಮೀರ ವಿಚಾರ, ಬಾಬ್ರಿ ಮಸೀದಿ ವಿವಾದ ಈ ಎಲ್ಲಾ ಪ್ರಯೋಗಗಳು ಮುಗಿದ ನಂತರ ಬಿಜೆಪಿ ಈಗ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ಜಾರಿಗೆ ಮುಂದಾಗಿದೆ. ಜನರು ದೇಶದಲ್ಲಿ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ವಾಜಪೇಯಿ ಆಡಳಿತ ಅವಧಿಯಲ್ಲಿ ಇದು ನಮ್ಮ ದೇಶ ಅಲ್ಲ ಎಂಬ ಭಾವನೆ ಎಂದೂ ಬರಲಿಲ್ಲ. ಆದರೆ, ಇಂದು ಮೋದಿ, ಶಾ ಅವರ ನಡವಳಿಕೆಗಳು ಜನರನ್ನು ಆತಂಕಕ್ಕೀಡುಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇನ್ನೂ ಮೋದಿ, ಅಮಿತ್ ಶಾ ಇಬ್ಬರ ಪೌರತ್ವ ಕಾಯ್ದೆಯ ಹೇಳಿಕೆಗಳು ಭಿನ್ನವಾಗಿವೆ. ಅವರು ಮಾತನಾಡಿಕೊಂಡು ಕಾಯ್ದೆ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.
ಆದಿತ್ಯರಾವ್ ಬಾಂಬ್ ಇಟ್ಟ ವಿಚಾರ ಒಂದು ದಿನ ಮಾಧ್ಯಮದಲ್ಲಿ ಬಂತು ಮುಗೀತು. ಅದೇ ಮುಸ್ಲೀಮರು ಯಾರಾದರೂ ಇಂತ ಕೆಲಸ ಮಾಡಿದ್ದಿದ್ದರೆ ಭಯೋತ್ಪಾದಕ ಎಂಬ ಪಟ್ಟ ಕಟ್ಟುತ್ತಿದ್ದರು. ಇತ್ತ ಅನಂತ್ ಕುಮಾರ್ ಹೆಗ್ಡೆ ಗಾಂಧೀಜಿಯನ್ನು ವಿರೋಧಿಸಿ ಮಾತಾಡುತ್ತಾರೆ. ಗೋಡ್ಸೆ ಮುರ್ದಾಬಾದ್ ಎಂದು ಪಾರ್ಲಿಮೆಂಟ್‌ನಲ್ಲಿ ಹೇಳಲು ಆಗುತ್ತಾ ನಿಮಗೆ? ಎಂದು ಪ್ರಶ್ನಿಸಿದರು.
ಕಾರಜೋಳ ಹಾಗೂ ಸಂಸದ ಜಿಗಜಿಣಗಿ ಎಲ್ಲಿಂದ ತಂದೆಯ ಬರ್ತ್ ಸರ್ಟಿಫಿಕೇಟ್ ತಂದುಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ದೇಶದಲ್ಲಿ ಹಿಂದೂ ಮುಸ್ಲಿಂ ಒಂದೆ ಕುಟುಂಬದಂತೆ ಬದುಕು ನಡೆಸುತ್ತಿದ್ದಾರೆ. ಹಾಗೇ ನೋಡಿದ್ರೆ ಮೋದಿ ನಮ್ಮ ದೊಡ್ಡಪ್ಪನ ಮಗ, ಅಮಿತ್ ಶಾ ನಮ್ಮ ಚಿಕ್ಕಪ್ಪನ ಮಗ ಆಗಬೇಕು ಎಂದು ಸಿಎಂ ಇಬ್ರಾಹಿಂ ಕುಟುಕಿದರು.