ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಇದರಿಂದ ಭಯಭೀತರಾದ ಜನ ಸ್ವಯಂ ಪ್ರೇರಿತವಾಗಿ ಗ್ರಾಮ ಹಾಗೂ ತಾಂಡಾವನ್ನು ಲಾಕ್ಡೌನ್ ಮಾಡುತ್ತಿದ್ದಾರೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮ ಹಾಗೂ ತಾಂಡಾವನ್ನು ಈಗಾಗಲೇ ಲಾಕ್ಡೌನ್ ಮಾಡಲಾಗಿದೆ.
ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮ ಮತ್ತು ತಾಂಡಾದಲ್ಲಿ ಇಂದಿನಿಂದ ಒಂದು ವಾರದವರೆಗೆ ಲಾಕ್ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ನಿತ್ಯ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಮಾತ್ರ ಅವಕಾಶ ಮಾಡಿ ಕೊಡಲಾಗಿದೆ. ತುರ್ತು ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಇರಲಿದೆ.
ಗ್ರಾಮದ ಹಿರಿಯರು ಹಾಗೂ ಯುವಕರು ಸೇರಿ ಲಾಕ್ಡೌನ್ ವಿಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಬೇಕಾಬಿಟ್ಟಿ ಯಾರೂ ಮನೆಯಿಂದ ಹೊರಗಡೆ ಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥರಿಗೆ ಸ್ಥಳೀಯ ಜನ ಪ್ರತಿನಿಧಿಗಳು ಸಹ ಬೆಂಬಲ ನೀಡಿದ್ದಾರೆ.