ವಿಜಯಪುರ: ಕೊರೊನಾ ಸೋಂಕಿತ ವೈದ್ಯಕೀಯ ವಿದ್ಯಾರ್ಥಿನಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ವಿದ್ಯಾರ್ಥಿಯೊಬ್ಬನನ್ನು ನಗರದ ಆದರ್ಶನಗರ ಪೊಲೀಸರು ಬಂಧಿಸಿದ್ದಾರೆ.
ಮಕಣಾಪುರದ ಅನಿಲ ಬಾಬು ರಾಠೋಡ್ ಬಂಧಿತ ಆರೋಪಿ. ಆಂಧ್ರಪ್ರದೇಶ ಮೂಲದ ಯುವತಿ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದು, ಈ ವಿದ್ಯಾರ್ಥಿನಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಕಾಣಿಸಿ ಕೊಂಡಿತ್ತು. ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ತನ್ನ ಸ್ನೇಹಿತರ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಆರೋಪಿ ಅನಿಲ್ ರಾಠೋಡ್ ಕದ್ದು ಅವುಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿ, ಇವಳೇ ಕೊರೊನಾ ಪಾಸಿಟಿವ್ ರೋಗಿ ಎಂದು ಬರೆದುಕೊಂಡಿದ್ದನು.
ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.