ವಿಜಯಪುರ : ಕೊರೊನಾ ಭಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ರೈತರು ಹತ್ತಿ, ಜೋಳ, ಸೇರಿದಂತೆ ಹಲವು ಕೃಷಿ ಬೆಳೆಗಳನ್ನ ಮಾರಾಟ ಮಾಡಲು ಬರದೇ ನಗರದ ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಇದರಿಂದಾಗಿ ವರ್ತಕರು ನಷ್ಟದ ಸುಳಿಗೆ ಸಿಲುಕಿದ್ದಾರೆ.
ಪ್ರತಿ ವರ್ಷವೂ ಏಪ್ರಿಲ್ ತಿಂಗಳಿಂದ ಜುಲೈ ತಿಂಗಳ ಅಂತ್ಯದವರೆಗೂ ಮಾರುಕಟ್ಟೆಯಲ್ಲಿ ಹತ್ತಿ ಮಾರಾಟ ಮಾಡಲು ರಾಯಚೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಯ ರೈತರು ವಿಜಯಪುರದ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜುಲೈ ತಿಂಗಳಲ್ಲಿ ಮಾರುಕಟ್ಟೆ ವ್ಯಾಪಾರ ಕೊರೊನಾ ಭೀತಿಯಿಂದ ಶೇ. 80 ರಷ್ಟು ಕುಂಠಿತಗೊಂಡಿದೆ.
ಮತ್ತೊಂದೆಡೆ ಸರ್ಕಾರ ಎಪಿಎಂಪಿ ಕಾಯ್ದೆ ತಿದ್ದುಪಡಿ ಮಾಡಿದ ಪರಿಣಾಮ ವ್ಯಾಪಾರವಿಲ್ಲದೆ ಸೆಸ್ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿ ವರ್ತಕರು ತಮ್ಮ ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ಎಪಿಎಂಪಿ ಮಾರುಕಟ್ಟೆಯನ್ನೇ ನಂಬಿಕೊಂಡು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೂಲಿಕಾರರ ಬದುಕು ದುಸ್ತರವಾಗಿದೆ.
ಒಟ್ಟಿನಲ್ಲಿ ಕೊರೊನಾ ಭೀತಿಯಿಂದಾಗಿ ಎಪಿಎಂಸಿ ಮಾರುಕಟ್ಟೆಗೆ ರೈತರು, ಖರೀದಿದಾರರು ಬಾರದ ಪರಿಣಾಮ ಸರ್ಕಾರದ ಆದಾಯಕ್ಕೂ ಕೊಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.