ವಿಜಯಪುರ: ನಗರದಲ್ಲಿರುವ ಶ್ರೀ ಭವಾನಿ ಬ್ಲೈಂಡ್ ಫೌಂಡೇಷನ್ ಏಳೆಂಟು ತಿಂಗಳ ಹಿಂದೆ ಅಂಧ ಕಲಾವಿದರು ಕಟ್ಟಿಕೊಂಡಿದ್ದ ಸಂಸ್ಥೆ. ಈ ಸಂಸ್ಥೆಯ ಮೂಲಕ ಜಾತ್ರೆ, ಮದುವೆ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಜೀವನ ಸಾಗಿಸುತ್ತಿದ್ದವರಿಗೆ ಈಗ ಮಹಾಮಾರಿ ಕೊರೊನಾ ಸಂಕಷ್ಟ ತಂದೊಡ್ಡಿದೆ.
ಇವರು ಜೀವನ ನಡೆಸೋದು ಮಾತ್ರ ಅಲ್ಲದೇ ಬೇರೆ ವಿಶೇಷ ಚೇತನರಿಗೆ ಉಚಿತ ಊಟ, ವಸತಿ ನೀಡುವುದರ ಜೊತೆಗೆ ಸಂಗೀತ ಕೂಡಾ ಕಲಿಸುತ್ತಿದ್ದರು. ಆದರೆ ಈಗ ಕೊರೊನಾ ಕಾರಣದಿಂದ ಅದಕ್ಕೆಲ್ಲಾ ಕೊಕ್ಕೆ ಬಿದ್ದಿದ್ದು, ಬ್ಲೈಂಡ್ ಸಂಸ್ಥೆ ಕಲಾವಿದರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಈ ಸಂಸ್ಥೆಯಲ್ಲಿ ವಿವಿಧ ಜಿಲ್ಲೆಗಳ ಒಟ್ಟು 30 ಮಂದಿಯಿದ್ದು, ಕೊರೊನಾತಂಕದಿಂದ ಅವರ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವಿರೋ ಕಟ್ಟಡಕ್ಕೆ 25 ಸಾವಿರ ರೂ. ಬಾಡಿಗೆ ಕಟ್ಟೋದಕ್ಕೆ ಕೂಡಾ ಅವರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ಕಟ್ಲಿಲ್ಲ. ಆರ್ಥಿಕ ಸಂಕಷ್ಟದಿಂದ 15 ಮಂದಿ ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸಲಾಗಿದೆ. ಯಾರಾದ್ರೂ ನೆರವಿಗೆ ಬರಲಿ ಅನ್ನೋದು ಅವರ ಆಶಯವಾಗಿದೆ.
ಒಟ್ಟಿನಲ್ಲಿ ಕೊರೊನಾ ಆರಂಭದ ದಿನಗಳಿಂದಲೂ ಈ ವಿಶೇಷ ಚೇತನ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ಅಥವಾ ಯಾರಾದರೂ ದಾನಿಗಳು ಮುಂದೆ ಬಂದು ನೆರವು ನೀಡಲಿ ಎಂಬುದೇ ನಮ್ಮೆಲ್ಲರ ಆಶಯ.