ವಿಜಯಪುರ, ಗಂಗಾವತಿ (ಕೊಪ್ಪಳ): ಕೊರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಇಂದು ನಗರದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸದಾನಂದ ನಾಯಕ ನೇತೃತ್ವದಲ್ಲಿ ಜನಾಂದೋಲನ ಅಂಗವಾಗಿ ಜಾಗೃತಿ ಅಭಿಯಾನ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಾಲನೆ ನೀಡಿ ಮಾಸ್ಕ್ ಧರಿಸುವ ಮೂಲಕ ಜನರು ಕೊರೊನಾ ತಡೆಯಲು ಸಹಕರಿಸುವಂತೆ ನಗರದ ನಾಗರೀಕರಿಗೆ ಅರಿವು ಮೂಡಿಸಿದರು. ಎಲ್‌ಬಿಎಸ್ ಮಾರುಕಟ್ಟೆ ವ್ಯಾಪಾರಸ್ಥರಿಗೆ ಜಿಲ್ಲಾಡಾಳಿತದಿಂದ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಕೋವಿಡ್ 19 ವೈರಸ್ ಕುರಿತು ಮುನ್ನೆಚ್ಚರಿಕೆ ಸಾರ್ವಜನಿಕರಿಗೆ ಆರೋಗ್ಯಾಧಿಕಾರಿಗಳು ಮನವಿ ಮಾಡಿದರು.
ಇನ್ನು ಮಾರಾಣಾಂತಿಕ ವೈರಾಣು ಹರಡುವಿಕೆ ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಠ 6 ಅಡಿಗಳ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕೈಗೆ ಸೋಪು ಮತ್ತು ನೀರಿನಿಂದ ತೊಳೆಯುವ ಮೂಲಕ ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಸಾಧ್ಯವೆಂದು ತಿಳಿಸಿದರು. ಜನಾಂದೋಲನ ಜಾಥಾಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಜಾಲನೆ ನೀಡಿದರು. ಜಾಥಾದಲ್ಲಿ ಡಿಹೆಚ್‌ಓ ಡಾ. ಮಹೇಂದ್ರ ಕಾಪಸೆ, ಎಸ್ಪಿ ಅನುಪಮ್ ಅಗರವಾಲ್ ಸೇರಿದಂತೆ ಹಲವು ಅಧಿಕಾರಿಗಳು ಜಾಥಾದಲ್ಲಿ ಭಾಗಿಯಾಗಿದರು.
ಇನ್ನು ಗಂಗಾವತಿಯಲ್ಲಿ ನಿತ್ಯವೂ ನ್ಯಾಯಾಲಯದಲ್ಲಿನ ಪ್ರಕರಣಗಳ ವಿಲೇವಾರಿ, ತೀರ್ಪು ಪ್ರಕಟದಂತಹ ನ್ಯಾಯಾಲಯಗಳ ಕಲಾಪಗಳಲ್ಲಿ ಮಗ್ನರಾಗಿರುವ ಇಲ್ಲಿನ ನ್ಯಾಯಾಧೀಶರು, ಶನಿವಾರ ಕೆಲಕಾಲ ಕಲಾಪದ ಕೆಲಸಗಳನ್ನು ಬದಿಗೊತ್ತಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜನರಲ್ಲಿ ಕೊರೊನಾದ ಬಗ್ಗೆ ಅರಿವು ಮೂಡಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಜನಾಂದೋಲನಾ ಕೋವಿಡ್- 19 ಎಂಬ ಕಾರ್ಯಕ್ರಮದ ಭಾಗವಾಗಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶಕ್ಕೆ ಜಾಥಾ ನಡೆಸಿದರು.
ನ್ಯಾಯಾಲಯದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಶ್ರೀಕೃಷೃದೇವರಾಯ ವೃತ್ತದಲ್ಲಿ ಜನರಿಗೆ ಜಾಗೃತಿ ಮೂಡಿಸಲಾಯಿತು. ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ, ಜಿ. ಅನಿತಾ, ಎಚ್.ಡಿ. ಗಾಯತ್ರಿ, ತಹಶೀಲ್ದಾರ್ ಎಂ. ರೇಣುಕಾ, ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಇದ್ದರು.