ವಿಜಯಪುರ: ಸಿಂದಗಿ ಉಪಚುನಾವಣೆಯಲ್ಲಿ ಅನುಕಂಪದ ಮತ ಪಡೆದು ಗೆಲುವು ಸಾಧಿಸಲು ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿಗೆ ಕಾಂಗ್ರೆಸ್ ಮಣೆ ಹಾಕಿದೆ. ಜೆಡಿಎಸ್ ಈಗಾಗಲೇ ಅಲ್ಪಸಂಖ್ಯಾತ ವರ್ಗದವರಿಗೆ ಟಿಕೆಟ್ ಫೈನಲ್ ಮಾಡಿದೆ. ಆದರೆ, ಬಿಜೆಪಿ ಮಾತ್ರ ಅಭ್ಯರ್ಥಿ ಘೋಷಣೆಗೆ ಮೀನಮೇಷ ಎಣಿಸುತ್ತಿದೆ. ನಾಮಪತ್ರ ಸಲ್ಲಿಸಲು ಕೊನೆಯ ಎರಡು ದಿನ ಮಾತ್ರ ಉಳಿದಿರುವ ಕಾರಣ ತಕ್ಷಣ ಅಭ್ಯರ್ಥಿ ಘೋಷಣೆ ಅನಿರ್ವಾಯವಾಗಿದೆ. ಎರಡು ಪಕ್ಷಗಳು ಜಾತಿ ಲೆಕ್ಕಾಚಾರ ಇಟ್ಟುಕೊಂಡೆ ತಮ್ಮ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿವೆ.
ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಅಲ್ಪಸಂಖ್ಯಾತ ಮತ ವಿಭಜನೆಯ ಉದ್ದೇಶ ಜೆಡಿಎಸ್ಗೆ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕಾಂಗ್ರೆಸ್ ಅನುಕಂಪ ಹಾಗೂ ಲಿಂಗಾಯತ ಮತ ನೆಚ್ಚಿಕೊಂಡು ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಇನ್ನೂ ಬಿಜೆಪಿಗೆ ಮಾಜಿ ಶಾಸಕ ರಮೇಶ ಭೂಸನೂರ ಅನಿರ್ವಾಯವಾಗಿದ್ದಾರೆ.
ಎಂಎಲ್ಸಿ ಅರುಣ ಶಹಾಪುರ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಉದ್ದೇಶವಾಗಿತ್ತು. ಆದರೆ, ಶಿಕ್ಷಕ ಕ್ಷೇತ್ರದ ಮತ ಬಿಟ್ಟು ಸಾಮಾನ್ಯ ಮತದಾರರನ್ನು ಅರುಣ ಶಹಾಪುರ ತಲುಪುವದು ಕಷ್ಟ ಎಂದು ಅರಿತು ಹೊಸ ಮುಖ ಹಾಕಬೇಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವರ ಪುತ್ರನಾಗಿದ್ದು, ಪ್ರಭಾವ ಹೊಂದಿದ್ದಾರೆ.
ಮನಗೂಳಿ ಕುಟುಂಬಕ್ಕೆ ಬಿಟ್ಟರೆ ಬೇರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಪ್ರಯೋಗಾತ್ಮಕವಾಗಿ ಬಿಜೆಪಿ ಸಹ ಹೊಸ ಮುಖಕ್ಕೆ ಮಣೆ ಹಾಕಬಹುದಿತ್ತು. ಸದ್ಯ ಸರ್ಕಾರ ತಮ್ಮದೇ ಆಗಿರುವ ಕಾರಣ ಗೆಲುವು ಬಿಜೆಪಿಗೆ ಅನಿರ್ವಾಯವಾಗಿದೆ. ಹೀಗಾಗಿ ರಮೇಶ ಭೂಸನೂರ ಅವರಿಗೆ ಟಿಕೆಟ್ ನೀಡಲೇ ಬೇಕಾಗಿದೆ.
ಜೆಡಿಎಸ್ ತಂತ್ರಗಾರಿಕೆ:
ಸದ್ಯ ಜೆಡಿಎಸ್ಗೆ ಈ ಉಪಚುನಾವಣೆ ಅಷ್ಟು ಮಹತ್ವದ್ದಲ್ಲ ಎನ್ನುವದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಸೋಲಿಸುವ ತಂತ್ರಗಾರಿಕೆಯಿಂದ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದೆ. ಇದು ಸಹಜವಾಗಿ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವಂತೆ ಬಿಜೆಪಿ ಇದರ ಲಾಭ ಪಡೆಯುವ ಉದ್ದೇಶ ಹೊಂದಿದೆ.
8 ರಂದು ನಾಮಪತ್ರ ಸಲ್ಲಿಕೆ:
ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿ ಅಕ್ಟೋಬರ್ 8ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜ್ಯ ಹಾಗೂ ರಾಷ್ಟ್ರ ನಾಯಕರು ನಾಮಪತ್ರ ಸಲ್ಲಿಕೆ ದಿನ ಉಪಸ್ಥಿತರಿರುವವರು.
ಅ.7ರಂದು ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ನಾಮ ಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಸಹ ಅ.8ರಂದು ಕೊನೆ ದಿನವಾಗಿರುವ ಕಾರಣ ಅಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಉತ್ತರ ಕರ್ನಾಟಕದ ಪ್ರಮುಖ ಬಿಜೆಪಿ ಮುಖಂಡರು ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿರಲಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮೂರು ಪ್ರಮುಖ ಪಕ್ಷಗಳು ಗೆಲುವಿಗಾಗಿ ಮತಬೇಟೆ ಆರಂಭಿಸಲಿದ್ದಾರೆ.