ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ಬಾಕಿ ಉಳಿದಿರುವ 150 ಮೀ.ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರು ಹರಿಸುವಂತೆ ಆಗ್ರಹಿಸಿ ರೈತರು ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಸರಕೋಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂದಾಜು 17,979 ಹೆಕ್ಟೇರ್ ನೀರಾವರಿ ಒದಗಿಸುವ ಮುಳವಾಡ ಏತ ನೀರಾವರಿ ಯೋಜನೆಯ ಹೂವಿನಹಿಪ್ಪರಗಿ ಶಾಖಾ ಕಾಲುವೆಯ ಬಾಕಿ ಕೆಲಸವನ್ನು ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ವಿಚಾರವಾಗಿ ಭಾಗದ ರೈತರು, ರೈತಸಂಘಟನೆಯ ಮುಖಂಡರು ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ
ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಬಸರಕೋಡ ಗ್ರಾಮದ ಸೀಮೆಯಲ್ಲಿ ಹಾಯ್ದು ಹೋಗಿರುವ ಈ ಕಾಲುವೆ 63.88 ಕಿ.ಮೀ ಉದ್ದವಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸದ್ಯಕ್ಕೆ 46.400 ರಿಂದ 46.600 ಕಿ.ಮೀ ರವರೆಗಿನ ಕಾಮಗಾರಿಯು ಸಂತ್ರಸ್ತ ರೈತರ ವಿರೋಧದಿಂದಾಗಿ ಮುಗಿಯದಿರುವ ಕಾರಣ ಒಟ್ಟಾರೆ ಯೋಜನೆ ನನೆಗುದಿಗೆ ಬಿದ್ದಂತಾಗಿದೆ ಎಂದು ತಿಳಿಸಿದರು.
ಈ ಯೋಜನೆಯ ಕಾಲುವೆ ಕಾಮಗಾರಿ ಪೂರ್ಣಗೊಂಡರೆ ಬಸರಕೋಡ, ಕುಂಟೋಜಿ, ಬಿದರಕುಂದಿ, ಢವಳಗಿ, ಕವಡಿಮಟ್ಟಿ, ತಾರನಾಳ, ಜಟ್ಟಗಿ, ಗೋನಾಳ, ರೂಢಗಿ ಗ್ರಾಮಗಳ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ದೊರಕಲಿದೆ. ಸಮಸ್ಯೆ ಪರಿಹಾರಕ್ಕೆ ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಅಭಿಯಂತರರು, ಶಾಸಕರು, ಸರಕಾರದ ಸಚಿವಾಲಯಕ್ಕೂ ಈ ಮನವಿ ಮಾಡಿದ್ದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ರ ಗಮನಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮೇ.30 ರೊಳಗಡೆ ಬಾಕಿ ಕಾಲುವೆ ಕಾಮಗಾರಿ ಆರಂಭಗೊಳ್ಳಬೇಕು. ಇಲ್ಲದಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರಿಗೆ ಜೂ.1 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.