ವಿಜಯಪುರ: ಖ್ಯಾತ ಚಲನಚಿತ್ರ ಹಾಸ್ಯ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ರಾಜು ತಾಳಿಕೋಟೆ ಅವರ ಕೌಟುಂಬಿಕ ಕಲಹ ಮತ್ತೆ ಸುದ್ದಿಯಾಗಿದೆ. ರಾಜು ತಾಳಿಕೋಟೆ ಹಾಗೂ ಅವರ ಸಂಬಂಧಿಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ಅಳಿಯ ಫಯಾಜ್ ಪಿಸ್ತೂಲ್ ತೋರಿಸಿ ಹೆದರಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜು ತಾಳಿ ತಾಳಿಕೋಟೆ ಆರೋಪಿಸಿದ್ದಾರೆ.
ಇತ್ತ ತಾಳಿಕೋಟೆ ಅವರ ಸೊಸೆ ಸನಾ ಕೊಡ ಅದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜು ತಾಳಿಕೋಟೆ ಹಾಗೂ ಅವರ ಸಂಬಂಧಿಕರು ಸೊಸೆಗೆ ವಿಷ ಕುಡಿಸಿ ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ನಗರದ ಯೋಗಾಪುರ ಕಾಲೋನಿ ನಿವಾಸಿಯಾಗಿರುವ ರಾಜು ತಾಳಿಕೋಟೆ ಅವರ ತಮ್ಮ ಅಕ್ಕನ ಮಗ ಫಯಾಜ್ ಕರಜಗಿ ಪತ್ನಿ ಸನಾ ಅವರ ಮನೆ ಬಳಿ ಬಂದಿದ್ದರು. ಈ ವೇಳೆ ಗಲಾಟೆ ನಡೆದಿದೆ. ಕೊನೆಗೆ ಎರಡೂ ಕಡೆಯವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜು ತಾಳಿಕೋಟೆ ಅವರ ಸಹೋದರಿ ಪುತ್ರ ಫಯಾಜ್ ಜೊತೆ ಮೂರು ವರ್ಷದ ಹಿಂದೆ ಸನಾ ಮದುವೆಯಾಗಿದ್ದರು. ಆದರೆ ಕೌಟುಂಬಕ ಕಲಹದಿಂದ ಇಬ್ಬರು ದೂರವಾಗಿದ್ದರು. ಆದರೆ ಎರಡು ದಿನದ ಹಿಂದೆ ಫಯಾಜ್ ಕುಟುಂಬದವರು ಮನೆ ಬೀಗ ಮುರಿದು ಕೆಲವು ದಾಖಲೆಗಳನ್ನು ಹಾಳು ಮಾಡಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಮನೆ ಬೀಗ ಮುರಿದಿದ್ದನ್ನು ತಾಳಿಕೋಟೆ ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಗೆ ಮಾವ ಫಯಾಜ್ ಕಾರಣ ಎಂದು ರಾಜು ತಾಳಿಕೋಟೆ ಪುತ್ರ ಭರತ ತಾಳಿಕೋಟೆ ಆರೋಪಿಸಿಸಿದ್ದಾರೆ. ಪರಸ್ಪರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.