ವಿಜಯಪುರ: ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬೊಮ್ಮನಹಳ್ಳಿ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಘಟಕದ ಬಳಿ ನಡೆದಿದೆ.
ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಮ್ಮನಹಳ್ಳಿ ಗ್ರಾಮದ ಮುದಕಪ್ಪ ಬಸವರಾಜ ವಿಠ್ಠಲ ಸಿಂಗ್ರಿ, ಮುದ್ದೇಬಿಹಾಳ ವಿದ್ಯಾನಗರ ನಿವಾಸಿ ಸಂತೋಷ ಈರಯ್ಯ ಹಿರೇಮಠ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಕಲಕೇರಿ ಕೆಇಬಿ ಕಚೇರಿಯಲ್ಲಿ ಲೈನ್‌ಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜು ಮಡಿವಾಳಪ್ಪ ಹಿಪ್ಪರಗಿ ಗಂಭೀರವಾಗಿ ಗಾಯಗೊಂಡಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂಡಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಸಿಂಗ್ರಿ ಏರ್‌ಟೇಲ್ ಕಂಪನಿಯ ಕಾರ್ಯನಿಮಿತ್ತ ತಾಳಿಕೋಟೆ ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದರು. ಸಂತೋಷ ಹಿರೇಮಠ ಮತ್ತು ರಾಜು ಹಿಪ್ಪರಗಿ ಇಬ್ಬರೂ ಕಲಕೇರಿಗೆ ಹೋಗುವಾಗ ಬೈಕುಗಳ ನಡುವೆ ಡಿಕ್ಕಿ ನಡೆದು ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.