ವಿಜಯಪುರ: ಸಿಎಂ ಗ್ರಾಮ ವಾಸ್ತವ್ಯ ಒಂದು ನಾಟಕ. ಶಾಲೆಯಲ್ಲಿ ಹೋಗಿ ಮಲ್ಕೊಂಡ್ರೆ ಊರು, ಜಿಲ್ಲೆ ಉದ್ಧಾರ ಆಗುತ್ತಾ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಾಸ್ತವ್ಯ ಮಾಡಿದಾಗ ಗ್ರಾಮದಲ್ಲಿ ಅವರು ಮಲಗಿಲ್ಲ. ಗ್ರಾಮದಲ್ಲಿ ಮಲಗೋದು ಬಿಟ್ಟು, ಬೇರೆ ಕಡೆ ಹೋಗಿ ಮಲ್ಕೊಂಡಿದಾರೆ ಎಂದು ವ್ಯಂಗ್ಯವಾಡಿದರು. ಈಗಾಗಲೇ ನೀವು ಫೈವ್ ಸ್ಟಾರ್ ಹೋಟೆಲ್, ಹೈಟೆಕ್ ಮನೇಲಿ ವಾಸವಿದ್ದೀರಿ. ಅದು ಬಿಟ್ಟು ವಾಸ್ತವ್ಯದ ನಾಟಕ ಮಾಡಬೇಡಿ ಎಂದರು.
ರೈತರ ಕಷ್ಟಕ್ಕೆ ಸ್ಪಂದಿಸುವ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ. ಗ್ರಾಮ ವಾಸ್ತವ್ಯ ರಾಜಕೀಯ ಗಿಮಿಕ್. ಇದನ್ನು ಜನ ನಂಬಲ್ಲ. ಕಳೆದ ಚುನಾವಣೆಯಲ್ಲಿ ಜನರು ನಿಮಗೆ ಉತ್ತರ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಕೇಂದ್ರದ ಕ್ಯಾಬಿನೆಟ್ನಲ್ಲಿ ಲಿಂಗಾಯತರಿಗೆ ಅನ್ಯಾಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ವರ್ಗದವರೂ ಚುನಾಯಿತರಾಗಿದ್ದಾರೆ. ಲಿಂಗಾಯತರಿಗೂ ಹಾಗೂ ದಲಿತರಿಗೂ ಸ್ಥಾನ ಕೊಡಬೇಕು ಎಂದು ಪ್ರಧಾನಿಗೆ ವಿನಂತಿ ಮಾಡಲಾಗುವುದು ಎಂದರು.
ಕೋಟ್ಯಂತರ ರೂ. ಡೀಲ್ :
ಜಿಂದಾಲ್ ಕಂಪನಿಗೆ ಜಮೀನು ನೀಡಿರುವುದರಲ್ಲಿ ಕೋಟ್ಯಂತರ ರೂಪಾಯಿ ಡೀಲ್ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದರು. ಅದರಲ್ಲಿ ಡೌಟ್ ಇಲ್ಲವೇ ಇಲ್ಲ. ಸಾವಿರಾರು ಎಕರೆ ಭೂಮಿಯನ್ನು ಹೀಗೆ ನೀಡುವುದರಲ್ಲಿ ಅಕ್ರಮ ನಡೆದಿದೆ ಎಂದರು.