ವಿಜಯಪುರ: ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ. ಒಂದು ರೀತಿಯಲ್ಲಿ ಗಂಡ-ಹೆಂಡತಿಯ ಸಂಬಂಧದಂತೆ. ಆದರೆ, ಈ ಸಂಬಂಧ ಪ್ರಾಮಾಣಿಕವಾದ ಕಾರ್ಯನಿರತರವಾದ ಸಂಬಂಧ ಇರಬೇಕು. ಈ ಗಡಿಯನ್ನು ಇಬ್ಬರು ದಾಟಬಾರದು. ಈ ಗಡಿದಾಟದ ಆರೋಗ್ಯಕರ ಸಂಬಂಧವಿದ್ದರೆ ಇಡೀ ರಾಜ್ಯಕ್ಕೆ ಶ್ರೇಯಸ್ಕರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕಾರಣಿಗಳು ಹಾಗೂ ಪತ್ರಕರ್ತರು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಪತ್ರಕರ್ತರು ಇರದಿದ್ದರೆ ರಾಜಕಾರಣಿಗಳನ್ನು ಮಾತನಾಡಿಸುವವರೂ ಯಾರೂ ಇರುತ್ತಿರಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು? ಪ್ರಥಮ ಪುಟ ರಾರಾಜಿಸುವುದೇ ರಾಜಕಾರಣ ಸುದ್ದಿಯಿಂದ. ಹೀಗಾಗಿ ನಮ್ಮದು ಅವಿನಾಭಾವ ಸಂಬಂಧ. ನಾವು ಜಗಳವಾಡಿದರೂ ಅದೊಂದು ರೀತಿ ಗಂಡ-ಹೆಂಡತಿಯ ಸಂಬಂಧದಂತೆ ಎಂದು ಅವರು ವ್ಯಾಖ್ಯಾನ ಮಾಡಿದರು.
ಪತ್ರಕರ್ತ ಪ್ರಾದೇಶಿಕವಾದಿರಲಿ: ಪತ್ರಿಕೆಗಳು ಪ್ರಾದೇಶಿಕವಾಗಿ ಹೊರಬರಬಹುದು. ಆದರೆ, ಪತ್ರಕರ್ತರು ಪ್ರಾದೇಶಿಕವಾಗಬಾರದು. ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು. ಉತ್ತರ, ದಕ್ಷಿಣ ಎಂಬ ಭೇದಭಾವ ಪತ್ರಕರ್ತರಲ್ಲಿ ಬೇಡ. ಈ ಭೇದಭಾವದಿಂದ ಯಾವ ಪ್ರಯೋಜನವೂ ಇಲ್ಲ. ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಈ ಸಮ್ಮೇಳನಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದವಿದೆ. ಬಸವನಾಡಿನ ಆಶಯ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಗಳನ್ನು ಮನದಾಳದಲ್ಲಿ ತುಂಬಿಕೊಂಡಾಗ ಮಾತ್ರ ಸಮ್ಮೇಳನ ಔಚಿತ್ಯ ಪೂರ್ಣವಾಗಲು ಸಾಧ್ಯ ಎಂದರು.
ಜೋಳದ ರೊಟ್ಟಿ ನೆನಪಿಸಿದ ಸಿಎಂ: ವಿಜಯಪುರ ಜನತೆ ಗಟ್ಟಿಜೋಳದಂತೆ. ಶ್ರೇಷ್ಠತಾಯಿ ಕೃಷ್ಣೆ ಹಾಗೂ ಮಣ್ಣಿನ ಭವ್ಯತೆ ಸೊಗಡಿನ ಫಲವಾಗಿ ಬೆಳೆಯುವ ವಿಜಯಪುರ ಜೋಳ ಅತ್ಯಂತ ಶ್ರೇಷ್ಠ. ಹೈಬ್ರೀಡ್ ಕಾಲದಲ್ಲಿಯೂ ಸಹ ವಿಜಯಪುರ ಜೋಳವನ್ನೇ ಅನೇಕರು ಬಳಸುವುದುಂಟು. ವಿಜಯಪುರ ಜೋಳದ ಶ್ರೇಷ್ಠತೆ, ಸತ್ವ ಹೈಬ್ರೀಡ್ ಜೋಳದಲ್ಲಿ ಇಲ್ಲ. ವಿಜಯಪುರ ಜೋಳದ ರೀತಿಯಲ್ಲಿಯೇ ಇಲ್ಲಿನ ಜನತೆ ಕೂಡ ಶ್ರೇಷ್ಠ. ಒಂದು ರೀತಿಯಲ್ಲಿ ಗಟ್ಟಿ ಹಾಗೂ ಶುದ್ಧ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ಕೃಷ್ಣೆಯ ಹನಿ ಹನಿ ನೀರು ಕೊನೆಯ ಭಾಗಕ್ಕೆ ತಲುಪಿದಾಗ ಈ ಭಾಗ ಭಾರತ ದೇಶಕ್ಕೆ ಅನ್ನ ಕೊಡುವ ನಂದನವನವಾಗಲಿದೆ. ಈ ಕನಸು ಸಾಕಾರಗೊಳಿಸಲು ಎಲ್ಲರೂ ಬದ್ಧತೆ ಪ್ರದರ್ಶಿಸಬೇಕಿದೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ, ಕೃಷ್ಣಾ ಯೋಜನೆಯಲ್ಲಿ ಸ್ಕೀಮ್ ಎ, ಸ್ಕೀಮ್ ಬಿ ಎಂದು ಹೇಳಿ ಅನೇಕ ನೀರಾವರಿ ಯೋಜನೆಗಳಿಗೆ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಕೃಷ್ಣಾ ಎಂದರೆ ಒಂದೇ ಸ್ಕೀಮ್. ಎ, ಬಿ ಎಂದು ಪರಿಗಣಿಸಬೇಡಿ ಎಂದು ಹೇಳಿ ‘ಸ್ಕೀಮ್ ಬಿ’ ಅಡಿ ಬರುವ ಒಂಬತ್ತು ಯೋಜನೆಗಳಲ್ಲಿ ನಾನು ಏಳು ಯೋಜನೆ ಪ್ರಾರಂಭಿಸಿದೆ ಎಂದು ತಾವು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿನ ಕೆಲವು ಅನುಭವ ಹಂಚಿಕೊಂಡರು.
ಪತ್ರಕರ್ತರ ಬೇಡಿಕೆಗೆ ಅಸ್ತು: ಇದೇ ವೇಳೆ ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ, ಮಾಶಾಸನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳಿಗೆ ಅಸ್ತು ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದರು. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸಲು ಬದ್ಧನಾಗಿದ್ದು, ನೈಜ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯ ದೊರಕಿಸುವ ಆಶಯದ ಹಿನ್ನೆಲೆಯಲ್ಲಿ ಸಂಘ ನೀಡುವ ಸಮರ್ಪಕ ಮಾಹಿತಿ ಆಧರಿಸಿ ಈ ಸೌಲಭ್ಯ ಜಾರಿಗೊಳಿಸಲಾಗುವುದು. ಅಲ್ಲದೇ ನಿವೃತ್ತ ಪತ್ರಕರ್ತರಿಗೆ ಮಾಶಾಸನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿರುವ ಪತ್ರಿಕಾ ಭವನಗಳನ್ನು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿರ್ವಹಣೆ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಈ ನಿರ್ವಹಣೆ ಸಂಘದಿಂದ ಸಾಧ್ಯವೇ ಎಂಬುದನ್ನು ಸಂಘವೂ ಸಹ ಇನ್ನೊಮ್ಮೆ ಪುನರ್ ಪರಿಶೀಲನೆ ನಡೆಸುವುದು ಅಗತ್ಯ ಎಂದರು. ಇನ್ನು ಎಲ್ಲ ರಂಗದಲ್ಲಿರುವ ಮುಖಂಡರು ಮೇಲ್ಮನೆಗೆ ಬಂದು ನಿಲ್ಲುತ್ತಾರೆ. ಅದೇ ರೀತಿ ಪತ್ರಕರ್ತರು ಸಹ ಮೇಲ್ಮನೆಯಲ್ಲಿ ಸದಸ್ಯರಾಗಬೇಕು ಎಂಬುದು ನನ್ನ ಭಾವನೆ ಕೂಡಾ ಹೌದು ಎಂದರು. ಪತ್ರಕರ್ತರು ಕಾರ್ಮಿಕರು ಅಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಪತ್ರಕರ್ತರನ್ನು ಕಾರ್ಮಿಕ ಪಟ್ಟಿಗೆ ಸೇರ್ಪಡೆ ಬಗ್ಗೆ ಸಂಘ ಇರಿಸಿದ ಬೇಡಿಕೆಯನ್ನು ಇನ್ನೊಮ್ಮೆ ಪರಿಶೀಲಿಸಿ ಎಂದು ಸೂಚಿಸಿದರು.
ದೊರೆ ಎನ್ನಬೇಡಿ: ನನಗೆ ರಾಜ್ಯದ ದೊರೆ ಅಂತ ಕರೆಯಬೇಡಿ. ದೊರೆ ಎಂದರೆ ನನಗೆ ಕಸಿವಿಸಿ. ಈಗ ಪ್ರಜಾಪ್ರಭುತ್ವದ ಕಾಲ. ಹಾಗಾಗಿ ದಯಮಾಡಿ ದೊರೆ ಅನ್ನಬೇಡಿ. ನಾಡಿನ ದೊರೆ ಎಂದು ರೂಪಿಸುವುದು ಬೇಡ. ಜನರೇ ಇಲ್ಲಿ ದೊರೆಗಳು. ನಾನಿರುವುದು ಜನರ ಸೇವಕನ ಸ್ಥಾನದಲ್ಲಿ. ಈ ಭಾವನೆ ಇದ್ದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಸಿಎಂ ಹೇಳಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಾಧ್ಯಮದ ಆಶಯ, ವಿಚಾರಗಳ ಬೆಳಕಿನಲ್ಲಿ ನೀತಿ ಸಂಹಿತೆಯನ್ನು ರೂಪಿಸಿಕೊಂಡು ಮುನ್ನಡೆಯವ ಆತ್ಮಾವಲೋಕನದ ಸಕಾಲ ಈಗ ಬಂದಿದೆ. ಸ್ವಾತಂತ್ರ್ಯ ಚಳವಳಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದು ಪತ್ರಿಕೋದ್ಯಮ ಇಂದು ಸಾಮಾಜಿಕ ಕಳಕಳಿ ಕಾಯ್ದುಕೊಂಡಿಲ್ಲ. ಲಾಭದಾಯಕ ದಂಧೆಯಾಗಿ ಪರಿವರ್ತನೆಯಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಇರುವ ಮಾಧ್ಯಮಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ದಾನ, ಧರ್ಮ, ಮಾನವೀಯ ಮೌಲ್ಯಗಳ ಆಗರ ವಿಜಯಪುರ. ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು, ಬಂಥನಾಳ ಶಿವಯೋಗಿಗಳು ಜನಿಸಿದ ಪಾವನ ನೆಲವಿದು. ವಿಜಯಪುರ ಜನತೆ ಹೃದಯವೈಶಾಲ್ಯತೆ ಯಾವ ರೀತಿ ಎಂದರೆ ಮಿನಿಸ್ಟರ್ ಅಷ್ಟೇ ಅಲ್ಲ ಡ್ರೈವರ್ ಸಾಹೇಬರು, ಗನ್ ಮ್ಯಾನ್ ಸಾಹೇಬರು ಊಟ ಮಾಡಿದ್ದಾರೆಯೇ? ಎಂದು ಕೇಳುವ ಔದಾರ್ಯತೆ, ಸೌಜನ್ಯತೆ ಇದೆ ಎಂದು ಜಿಲ್ಲೆಯ ಸಂಸ್ಕೃತಿಯನ್ನು ಗುಣಗಾಣ ಮಾಡಿದರು.
ವಿಜಯಪುರದ ಜ್ಞಾನಯೋಗಾ ಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವ್ಯಂಗಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿದರು. ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಸಿಇಓ ರಾಹಲ್ ಶಿಂಧೆ, ಪೊಲೀಸ್ ಅಧೀಕ್ಷಕ ಹೆಚ್ ಡಿ ಆನಂದಕುಮಾರ್, ಶಾಸಕರಾದ ಎಎಸ್ ಪಾಟೀಲ್ ನಡಹಳ್ಳಿ, ಸೋಮನಗೌಡ ಬಿ. ಪಾಟೀಲ, ರಮೇಶ ಭೂಸನೂರ, ಕರ್ನಾಟಕ ಸಾವಯುವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ್, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಅದೆಲ್ಲ ಸುಳ್ಳು: ಜಿ ಪರಮೇಶ್ವರ್ ಸ್ಪಷ್ಟನೆ