ವಿಜಯಪುರ : ಆಲಮಟ್ಟಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಮಿಸಿದ್ದು ಇಂದು ಬೆಳಗ್ಗೆ 10-45ಕ್ಕೆ ಕೃಷ್ಣಾನದಿಗೆ ಬಾಗಿನ ಅರ್ಪಿಸಲಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದಲ್ಲಿರುವ ಸಿಎಂ ವಿಜಯಪುರ ತಲುಪಿದ್ದು, ಆಲಮಟ್ಟಿ ಪ್ರವಾಸಿ ಮಂದಿರಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಗ್ಗೆ 10.45ಕ್ಕೆ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಇದರಿಂದ ಲಾಲ್ ಬಹುದ್ದೂರು ಶಾಸ್ತ್ರಿ ಜಲಾಶಯಕ್ಕೆ ಕೊನೆಗೂ ಬಾಗಿನ ಅರ್ಪಣೆ ಭಾಗ್ಯ ದೊರೆತಂತಾಗಿದೆ.
ಕೃಷ್ಣಾ ನದಿಯ ಗರಿಷ್ಠ ಮಟ್ಟ 519.60 ಮೀಟರ್ ನೀರು ಸಂಗ್ರಹವಿದ್ದು ಕಳೆದ ಎರಡು ತಿಂಗಳಿಂದ ಗರಿಷ್ಠ ನೀರು ಸಂಗ್ರಹ ಜಲಾಶಯದಲ್ಲಿದೆ. ನಾಡಿನ ಮುಖ್ಯಮಂತ್ರಿ ಬಿಎಸ್ ವೈ ನಾಳೆ ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಸುತ್ತಮುತ್ತ ಪ್ರದೇಶವನ್ನು ನವವಧುವಿನಂತೆ ಶೃಂಗರಿಸಲಾಗಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಎಚ್. ಡಿ. ಕುಮಾರಸ್ವಾಮಿ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಾಗಿತ್ತು. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಬೆಳಗಾವಿಯವರೆಗೆ ಆಗಮಿಸಿದ್ದ ಕುಮಾರಸ್ವಾಮಿ ಹವಾಮಾನ ವೈಪರೀತ್ಯದಿಂದ ಆಲಮಟ್ಟಿಗೆ ಆಗಮಿಸಲಿಲ್ಲ ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಬೇಕಾಯಿತು.
ರಾಜ್ಯ ಸರ್ಕಾರ ಕಾವೇರಿಗೆ ತೋರುವ ಕಾಳಜಿ ಕೃಷ್ಣೆಗೆ ತೋರುವುದಿಲ್ಲ ಎನ್ನುವ ಅಪವಾದ ಮೊದಲಿನಿಂದಲೂ ಇದೆ. ಇದನ್ನು ಹೋಗಲಾಡಿಸಲು ಸಿಎಂ ಯಡಿಯೂರಪ್ಪ ಆಲಮಟ್ಟಿಗೆ ಆಗಮಿಸುತ್ತಿದ್ದು, ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.