ವಿಜಯಪುರ : ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ ಎದುರಾಗುತ್ತಿರುವ ವೇಳೆಯೇ ಗಡಿ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶಿಸುವವರನ್ನು ತಪಾಸಣೆ ಮಾಡಲಾಗುತ್ತಿದೆ.
ಜಿಲ್ಲೆಯ ಗಡಿ ಭಾಗದಲ್ಲಿ 11 ಚೆಕ್ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆದರೆ, ಚೆಕ್ಪೋಸ್ಟ್ಗಳಲ್ಲಿ ತಪಾಸಣಾ ಕಾರ್ಯಕ್ಕೆ ಆರೋಗ್ಯ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು ಗೈರಾಗಿದ್ದಾರೆ. ಹೀಗಾಗಿ, ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.
ತಿಕೋಟಾ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿಯ ಚೆಕ್ಪೋಸ್ಟ್ನಲ್ಲಿ ಓರ್ವ ಆರೋಗ್ಯ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಇತರೆ ಸಿಬ್ಬಂದಿ ಗೈರಾಗಿದ್ದರು. ಹೀಗಾಗಿ, ಮಹಾರಾಷ್ಟ್ರದಿಂದ ಗಡಿ ಪ್ರವೇಶ ಮಾಡುವವರಲ್ಲಿ ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ವಾಪಸ್ ಕಳಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ನಿತ್ಯವೂ ಈ 11 ಚೆಕ್ಪೋಸ್ಟ್ ಮೂಲಕ ಮಹಾರಾಷ್ಟ್ರದಿಂದ ಸಾವಿರಾರು ಜನ ಜಿಲ್ಲೆಗೆ ಬರುತ್ತಿದ್ದಾರೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಲು ಕೇವಲ ಪೊಲೀಸರು ಸಂಕಷ್ಟ ಅನುಭವಿಸುವಂತಾಗಿದೆ. ವಿವಿಧ ಇಲಾಖೆ ಸಿಬ್ಬಂದಿ ಅವರಿಗೆ ಸಾಥ್ ನೀಡಿದ್ದರೆ, ಇನ್ನಷ್ಟು ಜಾಗೃತವಾಗಿ ಎಲ್ಲರನ್ನೂ ತಪಾಸಣೆ ಮಾಡಿ ಕಳುಹಿಸಲು ಅನುಕೂಲವಾಗಬಹುದು ಎಂದು ಸಿಬ್ಬಂದಿಯೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಓದಿ: ಮಕ್ಕಳಿಗಾಗಿ ಪ್ರತಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ಆರಂಭ : ಸಚಿವೆ ಶಶಿಕಲಾ ಜೊಲ್ಲೆ