ವಿಜಯಪುರ: ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ, ಹಾಗೂ ಎನ್‌ಪಿಆರ್ ಜಾರಿ ಮಾಡಿದ್ದಾಗಿನಿಂದ ಇದನ್ನ ವಿರೋಧಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಕೇಂದ್ರ ಸರ್ಕಾರ ಕೇಂದ್ರ ಬಿಜೆಪಿ ನಾಯಕರು ಈ ಕುರಿತು ಮಾತನಾಡುತ್ತಿಲ್ಲ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವೈ. ಸೈಯದ್ ಅಹಮ್ಮದ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಂದ ದೇಶದ ಅನೇಕ ಕಡೆಗಳಲ್ಲಿ ಸಾವು ನೋವು ಸಂಭವಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತಿದೆ. ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಮೋದಿ ಹೇಳಿದ ಯವಕರಿಗೆ ಉದ್ಯೋಗ ಭರವಸೆ ಹುಸಿಯಾಗಿದೆ. ಇನ್ನು ಆರ್ಥಿಕತೆಯ ಸ್ಥಿತಿ ಚಿಂತಾ ಜನಕವಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಬಿಜೆಪಿ ನಾಯಕರು ಸಿಎಎ ಕುರಿತು ಎಲ್ಲಾ ಪಕ್ಷ ಮುಖಂಡರ ಹಾಗೂ ಜನನಾಯಕರೊಂದಿಗೆ ಕಾಯ್ದೆ ಕುರಿತು ಸಾಧಕ ಭಾದಕ ಚರ್ಚಿಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಶಾಸಕ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ದೊರೆಸ್ವಾಮಿ ನಾಟಕ ಮಾಡುತ್ತಾರೆ ಎನ್ನುತ್ತಾರೆ. ಗಾಂಧಿನೂ ನಾಟಕ ಮಾಡಿದ್ದಾರೆ ಎಂದು ಬಿಜೆಪಿಯರು ಹೇಳುತ್ತಾರೆ. ಏನೇನು ಉಳಿಯಿತು ? ಸರ್ಕಾರ ಆಡಳಿತ ವೈಫಲ್ಯತೆ ಮುಚ್ಚಿ ಹಾಕಲು ಇಂತಹ ನಾಟಕ ಮಾಡುತ್ತಾರೆ ಎಂದು ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದರು.