ಮುದ್ದೇಬಿಹಾಳ: ಗ್ರಾ.ಪಂ ಚುನಾವಣೆಯ ಮತದಾನ ಮುಗಿಸಿಕೊಂಡು ಮತಪೆಟ್ಟಿಗೆ ಡಿ- ಮಸ್ಟರಿಂಗ್ ಕೇಂದ್ರಕ್ಕೆ ತರುತ್ತಿದ್ದ ವೇಳೆ ತಾಲೂಕಿನಲ್ಲಿ ಸಾರಿಗೆ ಬಸ್ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ಜಿಲ್ಲಾಡಳಿತದ ಅಧಿಕಾರಿಗಳು ಆರೋಗ್ಯ ವಿಚಾರಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ಈ ಶಾಂತವಿರ, ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ತಹಶೀಲ್ದಾರ್ ಎಂ.ಎಸ್.ಅರಕೇರಿ, ಗ್ರಾಪಂ ಚುನಾವಣೆಯ ಎಂಸಿಸಿ ನೋಡಲ್ ಅಧಿಕಾರಿಯೂ ಆಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಎನ್.ಬಿ.ಹೊಸಮನಿ, ಸಿಪಿಐ ಆನಂದ ವಾಘ್ಮೋಡೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಬಸ್ಸಿನ ಚಾಲಕ ಹುಲಗಪ್ಪ ಬಿರಾದಾರ ತನ್ನ ಸೀಟಲ್ಲಿ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದ್ದರು. ತಕ್ಷಣ ನೆರವಿಗೆ ಧಾವಿಸಿದ ಪಿಎಸ್ಐ ಮಲ್ಲಪ್ಪ ಮಡ್ಡಿ, ಅಗ್ನಿಶಾಮಕ ಠಾಣೆಯ ಪ್ರಮೋದ ಬಿ.ಎಸ್. ನೇತೃತ್ವದ ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಸಮೀಪದ ಗ್ರಾಮಸ್ಥರು ಹರಸಾಹಸಪಟ್ಟು ಬಸ್ ಚಾಲಕನನ್ನು ಹೊರತೆಗೆದಿದ್ದಾರೆ.
ಟಿಪ್ಪರ್ ಕ್ಲೀನರ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವೆಂಕಟೇಶ್ವರ ಕ್ಯಾಂಪ್‌ನ ಗೋವಿಂದಗೌಡ ಮೇಟಿಗೌಡ್ರ ಎಂಬಾತನ ಮುಖ, ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಇವರಿಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.