ಮುದ್ದೇಬಿಹಾಳ (ವಿಜಯಪುರ): ಕೊರೊನಾ ಹಿನ್ನೆಲೆ ಜಾತ್ರಾ ಉತ್ಸವಗಳು ವಿಜೃಂಭಣೆಯಿಂದ ಜರುಗದೆ ಸರಳವಾಗಿ ನೆರವೇರುತ್ತಿವೆ. ಇದೀಗ ಮುದ್ದೇಬಿಹಾಳದ ಜಾನುವಾರು ಜಾತ್ರೆ ಸಹ ಸರಳವಾಗಿ ನೆರವೇರಿದ್ದು, ರೈತರ ಕನಸಿಗೆ ತಣ್ಣೀರೆರಚಿದೆ.
ಲಕ್ಷ ಲಕ್ಷ ಬೆಳೆ ಬಾಳುವ ಎತ್ತುಗಳು ಜಾನುವಾರು ಜಾತ್ರೆಯಲ್ಲಿ ಮಾರಾಟವಾಗದೆ ಮರಳಿ ಮನೆಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಬಂದೊದಗಿತು.
ಬಹುಮಾನ ವಿತರಣೆ ರದ್ದು
ಪ್ರತಿವರ್ಷ ಅಯ್ಯನಗುಡಿಯ ಜಾತ್ರಾ ಕಮಿಟಿ ಹಾಗೂ ಎಪಿಎಂಸಿ ತಾಳಿಕೋಟಿ ವತಿಯಿಂದ ಉತ್ತಮ ಜಾನುವಾರುಗಳನ್ನು ಗುರುತಿಸಿ ಅವುಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿತ್ತು. ಈ ಸಲ ಕೊರೊನಾ ಕಾರಣದ ಹಿನ್ನೆಲೆ ಸರ್ಕಾರದಿಂದ ಪ್ರಶಸ್ತಿ ನೀಡುವುದನ್ನು ರದ್ದುಗೊಳಿಸಲಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ತಾಲೂಕಿನ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆ ಜರುಗುತ್ತಿದ್ದು, ಗುರುವಾರದಂದು ನಡೆದ ಜಾನುವಾರು ಜಾತ್ರೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಜಾನುವಾರುಗಳನ್ನು ತಂದ ರೈತರು ಎತ್ತುಗಳು ಮಾರಾಟವಾಗದೇ ಸಪ್ಪೆ ಮುಖ ಹಾಕಿಕೊಂಡು ವಾಪಸಾಗುವಂತಾಯಿತು.
ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಈ ಜಾತ್ರೆಗೆ ಜಾನುವಾರುಗಳನ್ನು ತೆಗೆದುಕೊಂಡು ಬಂದಿರುವ ರೈತರು ತಾವು ನಿಗದಿಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ಕೇಳುತ್ತಿರುವುದು ನಿರಾಸೆ ಮೂಡಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸುರಪೂರ ತಾಲೂಕಿನ ರಾಯನಪಾಳ್ಯದ ರೈತ ಭೀಮಪ್ಪ, ಕಳೆದ ವರ್ಷ 3 ಸಾವಿರ ರೂ. ಖರ್ಚು ಮಾಡಿ ಎತ್ತುಗಳನ್ನು ಜಾತ್ರೆಗೆ ತಂದಿದ್ದೆವು. ಒಳ್ಳೆಯ ವ್ಯಾಪಾರವೂ ಆಗಿತ್ತು. ಆದರೆ ಈ ವರ್ಷ ಕಡಿಮೆ ಬೆಲೆಗೆ ಜಾನುವಾರುಗಳನ್ನು ಕೇಳುತ್ತಿದ್ದಾರೆ.
ಅಲ್ಲದೇ ಈ ವರ್ಷ 5 ಸಾವಿರ ರೂ. ವಾಹನ ಬಾಡಿಗೆಗೆ ಕೊಟ್ಟಿದ್ದೇವೆ. ಯಾವುದೇ ಜಾನುವಾರುಗಳು ಮಾರಾಟವಾಗುತ್ತಿಲ್ಲ. ಮತ್ತೆ ಹೋಗುವಾಗಲೂ 5 ಸಾವಿರ ರೂ. ಮತ್ತೆ ವಾಹನಕ್ಕೆ ಬಾಡಿಗೆ ಕೊಡಬೇಕಿದೆ. ನಮ್ಮ ಬದುಕು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ ಕುಸಿದ ಒಣದ್ರಾಕ್ಷಿ ಬೆಲೆ: ಬೆಳೆಗಾರರು ಕಂಗಾಲು