ವಿಜಯಪುರ: ನಗರದ ಐತಿಹಾಸಿಕ ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದರು.
ಬಳಿಕ ಖುದ್ದು ಬೋಟಿಂಗ್ನಲ್ಲಿ ವಿಹಾರ ನಡೆಸಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ, ಡಿಸಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಸೇರಿ ಹಲವು ಗಣ್ಯರು ಎರಡು ಸುತ್ತು ಬೇಗಂ ತಾಲಾಬ್ ಕೆರೆಯಲ್ಲಿ ಬೋಟಿಂಗ್ ವಿಹಾರದ ಮಜಾ ಸವಿದರು.
ಇನ್ನು ಎಲ್ಲರೂ ಲೈಫ್ ಜಾಕೆಟ್ ಹಾಕಿಕೊಂಡು ಹುಟ್ಟು ಹಾಕಿ ಕೆರೆಯಲ್ಲಿ ಬೋಟಿಂಗ್ ಮಜಾ ಸವಿದರು. ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕನಸಿನ ಕೂಸಾಗಿದ್ದ ಬೇಗಂ ತಾಲಾಬ್ನಲ್ಲಿ ಬೋಟಿಂಗ್ ವ್ಯವಸ್ಥೆಗೆ ಅವರ ಸಮ್ಮುಖದಲ್ಲಿಯೇ ಸಚಿವ ಸಿ.ಸಿ.ಪಾಟೀಲ ಚಾಲನೆ ನೀಡಿದ್ದು ಪಾಟೀಲರ ಸಂತಸಕ್ಕೆ ಪಾರವೇ ಇರಲಿಲ್ಲ.
ಬಳಿಕ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಬೇಗಂ ತಾಲಾಬ್ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವದು. ಈ ನೀರು ಕೇವಲ ಬೋಟಿಂಗ್ಗೆ ಮಾತ್ರ ಬಳಕೆ ಮಾಡಲಾಗುವುದು. ಇಲ್ಲಿ ಬರುವ ವಾಯುವಿಹಾರಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುವುದು ಎಂದರು.