ವಿಜಯಪುರ: ಕೊರೊನಾ ಮಹಾಮಾರಿಯ ಮುಂದುವರೆದ ಭಾಗವಾಗಿರುವ ಬ್ಲ್ಯಾಕ್ ಫಂಗಸ್ ವೈರಸ್ ವಿಜಯಪುರಕ್ಕೂ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ 26 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ 26 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ಪ್ರಕರಣಗಳಿಗಾಗಿ ಪ್ರತ್ಯೇಕ ವಾರ್ಡ್ ಮಾಡಿ ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರದ ಬಿಎಲ್ಡಿಇ ಆಸ್ಪತ್ರೆಯಲ್ಲಿ-15, ಅಲ್ ಅಮೀನ್ ಆಸ್ಪತ್ರೆಯಲ್ಲಿ-1,ಆಯುಷ್- 5, ಅಶ್ವಿನಿ -1, ಚೌಧರಿ -2 ಹಾಗೂ ಯಶೋಧಾ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಅಂತಹ ಪ್ರಕರಣ ಬಂದರೆ ಅಲ್ಲೂ ಬೇರೊಂದು ವಾರ್ಡ್ ಮಾಡುವ ಚಿಂತನೆ ಇದೆ. ರಾತ್ರಿಯೊಳಗೆ ಇದಕ್ಕೆ ಸ್ಪಷ್ಟತೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.