ವಿಜಯಪುರ : ನಾನು ಮುಖ್ಯಮಂತ್ರಿಯಾದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ.ಕೆ.ಶಿವಕುಮಾರ್ ಅವರಿಗಿದೆ. ಮತ್ತೆ ತಾವು ಅದೇ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಹೆದರಿಕೆ ಇದೆ. ನಾನು ಪವರ್ಫುಲ್ ಮನುಷ್ಯ ಎಂಬ ಬಗ್ಗೆ ಡಿಕೆಶಿಗೆ ಸಂದೇಶ ಸಿಕ್ಕಿದೆ. ಇದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ 2 ಸಾವಿರ ಕೋಟಿ ರೂಪಾಯಿ ಆರೋಪದ ವಿರುದ್ಧ ಹರಿಹಾಯ್ದ ಪರಿ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ನಾನು ವಿಧಾನಸೌಧದಲ್ಲಿ 2 ಸಾವಿರ ಕೋಟಿ ರೂಪಾಯಿ ವಿಚಾರ ಮಾತನಾಡಿದಾಗ ಇದು ದೊಡ್ಡ ವಿಚಾರ ಆಗಲಿಲ್ಲ. ಚರ್ಚೆಯೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ. ಅದಕ್ಕಾಗಿ ಡಿ ಕೆ ಶಿವಕುಮಾರ್ ಈ ವಿಚಾರವನ್ನು ತೇಲಿಸಿದ್ದಾರೆ ಎಂದು ಟೀಕಿಸಿದರು.
ನನ್ನ ಬಗ್ಗೆ ಭಯ ಇದೆ. ಯತ್ನಾಳ್ ಏನಾದರೂ ಸಿಎಂ, ಸಚಿವರಾದರೆ ಬುಲ್ಡೋಜರ್ ತರ್ತಾರೆ ಅಂತಾ ಭಯ ಇದೆ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ಬುಲ್ಡೋಜರ್ಗೂ ಆರ್ಡರ್ ಕೊಟ್ಟಿದ್ದೀನಿ ಎಂದು ಯತ್ನಾಳ್ ವ್ಯಂಗವಾಡಿದರು.
ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ : ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ನನಗೆ ಸಚಿವ ಸ್ಥಾನ ಸಿಗಬಾರದು ಎಂದು ಷಡ್ಯಂತ್ರ ಮಾಡಲಾಗುತ್ತಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆಗೂ ಮಾತನಾಡಿದ್ದೇನೆ ಎಂದು ಯತ್ನಾಳ್ ಹೇಳಿದರು.
ಓದಿ: ಯತ್ನಾಳ್ಗೆ ಯಾರು ಒತ್ತಡ ಹಾಕಿದ್ದರು, ಹಣ ಕೇಳಿದ್ದರು ಎಂದು ಅವರೇ ಹೇಳಬೇಕು: ಬಿ.ವೈ.ವಿಜಯೇಂದ್ರ