ವಿಜಯಪುರ: 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಸ್ಥಾನ ಕೊಟ್ಟಿಲ್ಲ. ಅದು ಪಕ್ಷದ ಸಿದ್ದಾಂತ. ಯಡಿಯೂರಪ್ಪ ಅವರ ಪ್ರಕರಣದಿಂದ ಹೈಕಮಾಂಡ್ ಗಮನಕ್ಕೂ ಬಂದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈ ಕಮಾಂಡ್ ತುಂಬಾ ಸ್ಟ್ರಾಂಗ್ ಇದೆ. ಅನುವಂಶಿಕ ಪದ್ದತಿಯಲ್ಲಿ ನಮ್ಮ ಹೈಕಮಾಂಡ್ ಸ್ಥಾನ ನೀಡುವುದಿಲ್ಲ ಎಂದರು. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ಹೇಳಿದ್ದೆ. ಅದನ್ನು ನಾನು ಪಾಲಿಸಿದ್ದೇನೆ. ಇನ್ನು ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಕೂಡಾ ನನ್ನ ಬಗ್ಗೆ ಹೇಳಿಲ್ಲ. ಪಕ್ಷದ ಹಿತದೃಷ್ಟಿಯಿಂದ ಮಾತ್ರ ಹೇಳಿದ್ದೇನೆ. ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನದ ವಿಚಾರವಾಗಿ ಈ ಬಾರಿ ಕಡೆಗಣನೆ ಆಗಲ್ಲ ಎಂಬ ವಿಶ್ವಾಸವಿದೆ ಎಂದರು.
ಶಿವಾಜಿ ಮಹಾರಾಜರು ಶಿಕ್ಷಣ ಪಡೆದ ಪವಿತ್ರ ಭೂಮಿ ವಿಜಯಪುರ. ಗೋ ಹತ್ಯೆಯ ವಿರುದ್ಧ ಪ್ರಥಮ ಬಾರಿಗೆ ಕ್ರಾಂತಿಯಾಗಿದ್ದು, ವಿಜಯಪುರದಲ್ಲಿ. ಶಿವಾಜಿ ಮಹಾರಾಜರು ಗೋಹತ್ಯೆಯ ವಿರುದ್ಧ ಕ್ರಾಂತಿ ಮಾಡಿದ್ದರು. ಅದು ಎಲ್ಲರಿಗೂ ಗೊತ್ತಿದೆ. ಇಂತಹ ಜಿಲ್ಲೆಯ ಕಡೆಗಣನೆ ಮಾಡಲ್ಲ ಎಂದು ಭಾವಿಸಿರುವೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿ ಆಗತ್ತೊ ಇಲ್ಲವೋ ನೀವೇ ಬರೆದುಕೊಳ್ಳಿ, ನಾನು ಹೇಳಲ್ಲ ಎಂದರು.