ವಿಜಯಪುರ : ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 20,000 ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಹಾನಗಲ್ನಲ್ಲೂ ಗೆಲುವು ಆಗಲಿದೆ. ದಿವಂಗತ ಸಿ ಎಂ ಉದಾಸಿ ಉತ್ತಮ ಕೆಲಸ ಮಾಡಿದ್ದಾರೆ. ಶಿವರಾಜ್ ಸಜ್ಜನರ್ ಗೆಲ್ಲಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಜೋರಾಗಿ ನಡೆಯುತ್ತಿದೆ. ಸಚಿವ ವಿ.ಸೋಮಣ್ಣ ಠಿಕಾಣಿ ಹೂಡಿದ್ದಾರೆ. ಗ್ರೌಂಡ್ ವರ್ಕ್ ಚೆನ್ನಾಗಿ ಆಗಿದೆ, ಬಿಜೆಪಿ ಪರ ಅಲೆಯಿದೆ ಎಂದರು.
ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳಿದ್ದೇವೆ : ಮೋದಿ ಕೇಂದ್ರದಲ್ಲಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳಿದ್ದೇವೆ. ಏಳು ವರ್ಷಗಳಲ್ಲಿ ಮೋದಿ ಭಾರತಕ್ಕೆ ಸ್ಥಾನಮಾನ ಕೊಟ್ಟಿದ್ದಾರೆ.
ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಯೋಜನೆ ಸಿಗುತ್ತಿವೆ. ರೈತರ ಪರ ನಿಲುವು ಕೇಂದ್ರ ಸರ್ಕಾರದ್ದಾಗಿದೆ. ಝಿರೋ ಬ್ಯಾಲೆನ್ಸ್ ಮೂಲಕ ಬಡವರಿಗೆ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ಇದರಿಂದ ಫಲಾನುಭವಿಗಳ ಖಾತೆಗೆ ಯೋಜನೆ ಹಣ ಸಲ್ಲುತ್ತಿದೆ ಎಂದರು.
100 ಕೋಟಿ ಲಸಿಕೆ ನೀಡಿ ದಾಖಲೆ : ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ. ಕೋವಿಡ್ ಲಸಿಕೆ ಸಂಶೋಧನೆ ಮಾಡಿಸಲಾಗಿದೆ. ಲಸಿಕೆ ತಯಾರಿಸಿ ನೀಡಲಾಗಿದೆ. ದೇಶದ ಜನರಿಗೆ ಉಚಿತ ಲಸಿಕೆ ಹಾಕಲಾಗಿದೆ. ನಿನ್ನೆಯವರೆಗೆ 100 ಕೋಟಿ ಲಸಿಕೆ ನೀಡಿ ದಾಖಲೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡುಗು : ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡುಗು. ಒಂದೆರಡು ರಾಜ್ಯಗಳಲ್ಲಿ ಕೈ ಇದೆ. ಪಂಜಾಬ್ ನವಜೋತ ಸಿಂಗ್ ಸಿಧು ಹಾಗೂ ಕರ್ನಾಟಕದ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಹಾಳಾಗುತ್ತಿದೆ. ಕಾಂಗ್ರೆಸ್ ಮುಕ್ತ ಭಾರತವಾಗುತ್ತದೆ. ಸಿದ್ದರಾಮಯ್ಯ ಹಲವಾರು ಭಾಗ್ಯಗಳನ್ನು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಎಲ್ಲಾ ಭಾಗ್ಯಗಳನ್ನು ನೀಡಿದರೂ 2018ರಲ್ಲಿ ಯಾಕೆ ಪಕ್ಷ ಸೋತಿತು. ಕಾಂಗ್ರೆಸ್ ಭಾಗ್ಯಗಳು ಜನರಿಗೆ ತಲುಪಲ್ಲ ಎಂದು ಶೆಟ್ಟರ್ ಹೇಳಿದರು.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ : 2023ರ ವಿಧಾನಸಭಾ ಚುನಾವಣೆ, 2024ರ ಲೋಕಸಭೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ-ಡಿಕೆಶಿ ಭ್ರಮೆಯಲ್ಲಿದ್ದಾರೆ. ಉಪಚುನಾವಣೆ ಸೋಲು ಖಚಿತವೆಂದು ಅವರಿಗೆ ಅರ್ಥವಾಗಿದೆ. ಹಾಗಾಗಿ, ಬಿಜೆಪಿ ಹಣ ಹಂಚುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಅವರೇ ಈ ಹಿಂದೆ ಹಣ ಹಂಚಿ ಚುನಾವಣೆ ಮಾಡಿದ್ದಾರೆ.
ಅವರಿಗೆ ಹಿಂದೆ ತಾವು ಮಾಡಿದ ಕೆಲಸ ನೆನಪು ಮಾಡಿಕೊಂಡಿರಬೇಕು. ಅಲ್ಪ ಸಂಖ್ಯಾತರು ಬಿಜೆಪಿಗೆ ಮತ ಹಾಕಲಿದ್ದಾರೆ. ಅಲ್ಪ ಸಂಖ್ಯಾತರ ಬಗ್ಗೆ ಕನಿಕರ ಮಾತನಾಡುವ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಪಿಸು ಮಾತಾಡಿದ ಸಲೀಂ ಮೇಲೆ ಮಾತ್ರ ಕ್ರಮ ತೆಗೆದುಕೊಂಡಿದೆ. ಉಗ್ರಪ್ಪ ಮೇಲೆ ಕ್ರಮ ಯಾಕೆ ತೆಗೆದು ಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.