ವಿಜಯಪುರ: ಬಿಜೆಪಿ ಅಧಿಕಾರ ದಾಹಕ್ಕಾಗಿ ಆಡಳಿತ ಯಂತ್ರವನ್ನು ನಿಷ್ಪ್ರಯೋಜಕಗೊಳಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದರು.
ವಿಜಯಪುರದಲ್ಲಿ ಶುಕ್ರವಾರ ಮಾತನಾಡಿದ ಅವರು, ಕೇವಲ ಅಧಿಕಾರದ ಹಪಾಹಪಿಗಾಗಿ ಕುತಂತ್ರ ರಾಜಕೀಯ ಮಾಡುತ್ತಿದೆ. ಆಪರೇಶನ್ ಕಮಲ ಮಾಡುವುದಿಲ್ಲ ಎಂಬುದು ಕೇವಲ ಜನರ ಕಣ್ಣೊರೆಸುವ ತಂತ್ರ ಆದರೆ, ತೆರೆಮರೆಯಲ್ಲಿ ಆಪರೇಶನ್ ಕಮಲ, ಕುತಂತ್ರ ರಾಜಕೀಯವನ್ನು ಬಿಜೆಪಿ ಮುಂದುವರಿಸಿದೆ ಎಂದರು.
ರಾಜ್ಯದ ಹಿತಕ್ಕಾಗಿದ್ದರೆ ಪರವಾಗಿಲ್ಲ, ಕೇವಲ ಅಧಿಕಾರ ದಾಹಕ್ಕಾಗಿ ಬಿಜೆಪಿ ಈ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಇದು ಅನಾವಶ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ನಮ್ಮ ಇಲಾಖೆ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿದ್ದಾರೆ. ಪ್ರತಿಪಕ್ಷಗಳ ಕುತಂತ್ರದಿಂದ ಕೆಲಸಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಆಪರೇಶನ ಕಮಲಕ್ಕಾಗಿ ಹಣದ ಆಮಿಷ ವಿಚಾರ ಶಾಸಕರನ್ನು ಖರೀದಿಸುವ ವ್ಯಾಪಾರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದರು.
ಬಿಜೆಪಿ ವಾಮಮಾರ್ಗಕ್ಕೆ ಪ್ರತಿಯಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಅಗತ್ಯವಾಗಿ ಪ್ರಯತ್ನ ಮಾಡುತ್ತಿವೆ ಎಂದರು.
ಲೋಕಸಭೆ ಚುನಾವಣೆಗೆ ಮೈತ್ರಿಕೂಟದಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕೆ ಸೋಲು ಅನುಭವಿಸಬೇಕಾಯಿತು ಎಂದರು.