ವಿಜಯಪುರ: ಎರಡು ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿರುವ ಭೀಕರ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದಲ್ಲಿ ಇಂದು ನಸುಕಿನ ಜಾವ ನಡೆದಿದೆ.
ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ಮೂಲದ ಬೈಕ್ ಸವಾರರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಅಪಘಾತದ ಬಳಿಕ ಬೈಕ್ಗಳು ಹೊತ್ತಿ ಉರಿದಿವೆ. ಮೃತರಲ್ಲಿ ಒಬ್ಬ ಕಲಬುರಗಿ ಜಿಲ್ಲೆಯ ಅಫಜಲಪುರದ ಕುಮಾರ ಬಾಲಕುಂದಿ ( 22) ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ತಿಳಿದು ಬಂದಿಲ್ಲ. ಮೃತರ ತಲೆಗೆ ಗಾಯವಾಗಿದ್ದು, ಬೈಕ್ಗಳು ಭಸ್ಮವಾಗಿವೆ.
6 ಮಂದಿ ಸ್ನೇಹಿತರು ಬೈಕ್ನಲ್ಲಿ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯನ ದರ್ಶನ ಪಡೆಯಲು ಹೋಗುತ್ತಿದ್ದರು. ಈ ವೇಳೆ ದಿಂಡವಾರ ಬಳಿ ಎದುರಿಗೆ ಬಂದಿದ್ದ ಇನ್ನೊಂದು ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿ ಏಕಾಏಕಿ ಪೆಟ್ರೋಲ್ ಚೆಲ್ಲಿ ಎರಡು ಬೈಕ್ಗಳು ಕ್ಷರ್ಣಾಧದಲ್ಲಿ ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಮೂವರು ಮೃತಪಟ್ಟು, ಇನ್ನೊಬ್ಬನಿಗೆ ಗಾಯಗಳಾಗಿವೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.