ವಿಜಯಪುರ: ಬಿಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಅಧಿಕ ಮಳೆಯಾಗಿದ್ದು, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಹಾಗೆಯೇ ಜಿಲ್ಲೆಯ ಪ್ರಸಿದ್ಧ ಕೆರೆ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತಿದೆ.
ಬಿಸಿಲು ನಾಡಿನಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಎಷ್ಟು ಹೆಸರು ವಾಸಿಯೋ ಅಷ್ಟೇ, ಪುರಾತನ ಕಾಲದ ಕೆರೆಗಳು ಕೂಡ ಅಧಿಕ ಸಂಖ್ಯೆಯಲ್ಲಿವೆ. ಈ ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಭೂತನಾಳ ಕೆರೆ ಭರ್ತಿಯಾಗಿದೆ. ಬಿಸಿಲಿನ ತಾಪದಲ್ಲಿರುವ ಜನರಿಗೆ ಮಲೆನಾಡಿನ ಅನುವಭ ಸದ್ಯ ಈ ಕೆರೆ ನೀಡುತ್ತಿದೆ. ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಕುಟುಂಬ ಸಮೇತವಾಗಿ ಆಗಮಿಸಿ ಖುಷಿ ಪಡುತ್ತಿದ್ದಾರೆ.
ಮಳೆ ಉತ್ತಮವಾದ ಪರಿಣಾಮ ಕೆರೆ ಭರ್ತಿಯಾಗಿದ್ದು, ನಿತ್ಯ ಕೆಲಸದಲ್ಲಿ ಬ್ಯುಸಿಯಾಗಿರೋ ನಗರದ ಜನತೆ ಆಯಾಸ ತಣಿಸಿಕೊಳ್ಳಲು ಈ ಕೆರೆಗೆ ಬರ್ತಿದ್ದಾರೆ. ಕೆಲವರು ಈಜಿ ಸಂಭ್ರಮಿಸುತ್ತಿದ್ದಾರೆ. ಇನ್ನೋಂದು ಕಡೆ ಯುವಕರು ಮಾಸ್ಕ್ ಧರಿಸದೇ ಗುಂಪು ಗುಂಪಾಗಿ ಸೆಲ್ಪಿಗೆ ಪೋಸ್ ಕೊಡುತ್ತಿದ್ದರು. ಫಾಲ್ಸ್ ನೋಡಲು ಜಿಲ್ಲೆಯ ಜನರು ನೆರೆಯ ಮಹಾರಾಷ್ಟ್ರದ ಅಂಬೋಲಿ ಫಾಲ್ಸ್, ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಫಾಲ್ಸ್ ಗೆ ತೆರಳಬೇಕಾಗಿತ್ತು. ಸದ್ಯ ಭೂತನಾಳ ಕೆರೆ ತುಂಬಿ ಹರಿಯುತ್ತಿರೋದರಿಂದ ಇಲ್ಲಿಗೆ ಸ್ನೇಹಿತರು ಜೊತೆ ಬಂದಿದೇವೆ ಎನ್ನುತ್ತಾರೆ ಇಲ್ಲಿಗೆ ಬಂದ ಪ್ರವಾಸಿಗರು.
ವಿಜಯಪುರ ನಗರಕ್ಕೆ ಕುಡಿಯುವ ನೀರಿಗಾಗಿ ಈ ಕೆರೆಯ ಯೋಜನೆಯನ್ನು ಸರ್ ಎಮ್ ವಿಶ್ವೇಶ್ವರಯ್ಯ ಅವರು ಯೋಜನೆ ರೂಪಿಸಿದ್ದರು. ಇಂದಿಗೂ ಕೂಡ ನಗರ ವಾಸಿಗಳು ಈ ಕೆರೆಯ ನೀರನ್ನು ಕುಡಿಯುತ್ತಿದ್ದಾರೆ. ಒಟ್ಟು 120 ಎಕರೆ ವಿಶಾಲವಾದ ಪ್ರದೇಶದಲ್ಲಿ ಕೆರೆಯಿದ್ದು, ವಿಹಾರಕ್ಕಾಗಿ ಪಕ್ಕದಲ್ಲಿ ಉದ್ಯಾನವನ, ಮಕ್ಕಳ ಆಟದ ಪಾರ್ಕ್ ಕೂಡ ನಿರ್ಮಿಸಲಾಗಿದೆ. ಅಲ್ಲದೇ ಅರಣ್ಯ ಇಲಾಖೆಯಿಂದ ಅಂದಾಜು 8 ಎಕರೆ ಜಾಗದಲ್ಲಿ ನೆಡುತೋಪು ನಿರ್ಮಿಸಲಾಗಿದ್ದು, ಕೆರೆಗೆ ಬರುವ ಪ್ರವಾಸಿಗರು ಸಕತ್ ಏಂಜಾಯ್ ಮಾಡಲು ಅನುಕೂಲವಾಗಿದೆ.
ಕೃಷ್ಣಾ ನದಿಯಿಂದ, ಕೆರೆಗೆ ಪೈಪ್ ಲೈನ್ ಮೂಲಕ ನೀರು ಹರಿಸಲು 53 ಕಿ.ಮೀ ಪೈಪ್ಲೈನ್ ಅಳವಡಿಸಲಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಕೆರೆ ತುಂಬಿಸಲಾಗುತ್ತೇ. ಈ ವರ್ಷ ಮಳೆ ಉತ್ತಮವಾಗಿದ್ದು ಸದ್ಯ ಕೆರೆ ಭರ್ತಿಯಾಗಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ಹಳೆಯ ಕೆರೆಯನ್ನು ಅಭಿವೃದ್ಧಿ ಪಡಿಸುವ ಕನಸು ಹೊಂದಿದ್ದ ಮಾಜಿ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಕೆರೆ ಅಭಿವೃದ್ಧಿಗಾಗಿ ಸರ್ಕಾರದಿಂದ 13 ಕೋಟಿ ರೂ. ಬಿಡುಗಡೆ ಮಾಡಿ, ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಮುಂಭಾಗದಲ್ಲಿ ಹೋಟೆಲ್ ವ್ಯವಸ್ಥೆಯನ್ನು ಮಾಡಿದ್ದಾರೆ.