ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹೆಚ್ಚುವರಿಯಾಗಿ ವಿವಿಧ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಭೀಮಾನದಿ ಉಕ್ಕಿ ಹರಿಯುತ್ತಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ-ಲವಗಿ ಬ್ಯಾರೇಜ್ ತುಂಬಿ ಹರಿಯುತ್ತಿದ್ದು ಬ್ಯಾರೇಜ್ ಮೇಲೆ ನೀರು ಬಂದ ಕಾರಣ ವಾಹನಗಳ ಓಡಾಡಕ್ಕೆ ತೊಂದರೆಯಾಗಿದೆ. ಕಳೆದ ಎರಡು ದಿನಗಳಿಂದ ಉಮರಾಣಿಯಿಂದ ಮಹಾರಾಷ್ಟ್ರದ ಸಾದೇಪುರ ಕಡೆ ಹಾಗೂ ಸಾದೇಪುರದಿಂದ ಕರ್ನಾಟಕದ ಉಮರಾಣಿಗೆ ಬರುವ ವಾಹನಗಳು ನಡು ನೀರಿನಲ್ಲಿ ಸಿಲುಕಿ ಹಾಕಿಕೊಳ್ಳುತ್ತಿವೆ. ಇಂದು ಸಹ ಪಿಕಪ್ ವಾಹನ ಸಿಲುಕಿಕೊಂಡು ತೊಂದರೆ ಅನುಭವಿಸಬೇಕಾಯಿತು.
ವಾಹನ ನಡು ರಸ್ತೆಯಲ್ಲಿ ಸಿಲುಕಿ ನೀರಿನ ಸೆಳೆತ ಹೆಚ್ಚಾಗಿ ಸೇತುವೆಯಿಂದ ನದಿಯೊಳಗೆ ಬೀಳುವ ಹಂತ ತಲುಪಿತ್ತು. ಆದರೆ ಚಾಲಕ ವಾಹನವನ್ನು ಸೇತುವೆ ದಾಟಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾನೆ. ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ವಾಹನವನ್ನು ಹೊರಗೆ ಎಳೆದು ತಂದು ಆಗಬಹುದಾದ ಅನಾಹುತ ತಪ್ಪಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಇಬ್ಬರ ಸಾವು:
ಕಳೆದ ಒಂದು ವಾರದಲ್ಲಿ ಭೀಮಾ ನದಿಯ ಸೇತುವೆ ದಾಟಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ ಬುಧವಾರ ಸಂಬಂಧಿಕರ ಅಂತ್ಯಕ್ರಿಯೆಗೆ ಮಹಾರಾಷ್ಟ್ರಕ್ಕೆ ತೆರಳಿ ಬರುತ್ತಿದ್ದಾಗ ಇದೇ ಉಮರಾಣಿ ಬ್ಯಾರೇಜ್ನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದನು. ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿಯ ಶವ ನಾಲ್ಕು ದಿನಗಳ ನಂತರ ಟಾಕಳಿ ಸೇತುವೆ ಬಳಿ ಪತ್ತೆಯಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಲವಗಿ ಗ್ರಾಮದ ಭೀಮಾ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮಹಾರಾಷ್ಟ್ರದ ಕಂದಲಗಾಂವ ಗ್ರಾಮದ ಶಂಕರ ಕೊಲೆ ಕಳೆದ ಶನಿವಾರ ನಂದೂರ ಗ್ರಾಮದ ಸಂಬಂಧಿಕರ ಮನೆಯಿಂದ ವಾಪಸ್ ಬರುವಾಗ ಭಂಡರಕವಟೆಯ ಬ್ರೀಜ್ ಕಂ ಬಾಂದಾರ ಮೇಲಿಂದ ಬೈಕ್ ಸಮೇತ ಕೊಚ್ಚಿ ಹೋಗಿ ಶವವಾಗಿ ಪತ್ತೆಯಾಗಿದ್ದಾನೆ.
ಪ್ರಯಾಣಿಕರು ಬಚಾವ್:
ಮಹಾರಾಷ್ಟ್ರದ ಸಾದೇಪೂರದಿಂದ ಸಿಮೆಂಟ್ ತುಂಬಿಕೊಂಡ ವಾಹನ ಕರ್ನಾಟಕದ ಉಮರಾಣಿ ಕಡೆಗೆ ಬರುವಾಗ ಉಮರಾಣಿ- ಲವಗಿ ಬ್ಯಾರೇಜ್ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು. ಆದರೆ ಅದೃಷ್ಟವಶ ಬ್ಯಾರೇಜ್ನ ಕಲ್ಲಿಗೆ ತಾಗಿ ನಿಂತಿದೆ. ಅದರಲ್ಲಿದ್ದ 7 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.