ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಹೈಕಮಾಂಡ್ ದೆಹಲಿ ಬುಲಾವ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಅದನ್ನು ಯತ್ನಾಳ್ ಅವರಿಗೆ ಕೇಳಬೇಕು, ನನಗೇನು ಗೊತ್ತಿಲ್ಲಾ ಎಂದರು.
ವಿಜಯಪುರ ತಾಲೂಕಿನ ಇಟ್ಟಂಗಿಹಾಳದಲ್ಲಿ ಮಾತನಾಡಿದ ಅವರು, ಅವರನ್ನು ದೆಹಲಿಗೆ ಕರೆದಿದ್ರೆ ಅಲ್ಲಿಗೆ ಹೋದ ಬಳಿಕ ಅವರೇ ಪ್ರೆಸ್ ಮೀಟ್ ಮಾಡಿ ಹೇಳಬೇಕು ಎಂದರು.
ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಭಾಗವಸಿದ್ದ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಒಬ್ಬರೇ ಭಾಗವಹಿಸಿಲ್ಲ, ಬೇರೆ ಬೇರೆ ಸಮುದಾಯದವರೂ ಭಾಗವಹಿಸಿದ್ದಾರೆ. ಆದರೆ, ಒಂದು ವಿನಂತಿ ಮಾಡುತ್ತೇನೆ, ಸಿಎಂ ಸ್ಥಾನ ಗೌರವಯುತ ಸ್ಥಾನ, ಅದಕ್ಕೆ ಗೌರವ ಕೊಡಬೇಕು ಎಂದು ಪರೋಕ್ಷವಾಗಿ ಶಾಸಕ ಯತ್ನಾಳ್ ಸಿಎಂ ವಿರುದ್ಧ ನೀಡುತ್ತಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಬೇಕು ಎಂಬ ಯತ್ನಾಳ್ ಹೇಳಿಕೆ ಸರಿಯಲ್ಲ, ಅದು ಯತ್ನಾಳ್ ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ, ರಾಜೀನಾಮೆ ಕೊಡುವವರು ಅದಕ್ಕೆ ಬದ್ಧರಾಗಿರಬೇಕಲ್ಲ ಎಂದು ಯತ್ನಾಳ್ಗೆ ಮರು ಪ್ರಶ್ನೆ ಮಾಡಿದರು.
ಯತ್ನಾಳ್ ಹೇಳಿದ್ರೆ ರಾಜೀನಾಮೆ ಕೊಡಬೇಕು ಅಂತ ಎಲ್ಲಿದೆ? ಇದು ಜಾತ್ಯತೀತ ರಾಷ್ಟ್ರ, ಅವರವರ ಸಮುದಾಯಗಳಿಗೆ ಬೇಡಿಕೆ ಸಲ್ಲಿಸೋದು ಅವರ ಹಕ್ಕು ಅದನ್ನು ಕೇಳುವ ಅಧಿಕಾರ ಬೇರೆಯವರಿಗೆ ಇಲ್ಲ. ಹಾಗಂತ ಈ ರೀತಿ ಬೇರೆಯವರ ಮೇಲೆ ಒತ್ತಡ ಹಾಕೋದು ಸರಿಯಲ್ಲ ಎಂದರು.