ವಿಜಯಪುರ: ಉತ್ತರ ಕರ್ನಾಟಕ ಎಂದರೆ ಕೇವಲ ಹುಬ್ಬಳ್ಳಿ-ಧಾರವಾಡ ಅಲ್ಲ. ಇನ್ವೆಸ್ಟರ್ ಮೀಟ್ ಉತ್ತರ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಮಾಡಬಹುದಿತ್ತು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಬರಿ ಹುಬ್ಬಳ್ಳಿ-ಧಾರವಾಡಗೆ ಯೋಜನೆಗಳನ್ನ ತಂದರೆ ಹೇಗೆ ವಿಜಯಪುರ, ಕಲಬುರಗಿ, ಬಾಗಲಕೋಟ ಜಿಲ್ಲೆಯಲ್ಲಿ ಯೋಜನೆ ಮಾಡಬಹುದಿತ್ತು ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕಾಂಗ ಸಭೆ ಮಾಡಿ ಎಂದು ಶಾಸಕರೆಲ್ಲ ಒಂದು ಸಭೆ ಮಾಡಿ ಸಿಎಂಗೆ ಸಹಿ ಮಾಡಿಕೊಡುತ್ತೇವೆ ಎಂದು ಹೇಳಿದರು. ಶಾಸಕರು ಒಂದೆಡೆ ಸೇರುತ್ತೇವೆ, ಎಷ್ಟು ಜನ ಬರುತ್ತಾರೆಂದು ಗೊತ್ತಿಲ್ಲ ಎಂದ ಅವರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಸಿಎಂಗೆ ಪತ್ರನೀಡುತ್ತೇವೆ ಎಂದು ತಿಳಿಸಿದರು.
ಇನ್ನೂ ಆರ್ ಅಶೋಕ ಪುತ್ರರಿಗೆ ಸಂಬಂಧಿಸಿರುವ ಕಾರ್ ಅಪಘಾತ ಕುರಿತು ಪ್ರತಿಕ್ರಿಯಿಸಿ, ಕಾರ್ ಇದೋ- ಅದೋ ಯಾವುದು ಎಂದು ಗೊತ್ತಿಲ್ಲ. ಪೊಲೀಸ್ ಅಧಿಕಾರಿ ಹೇಳುವಂತೆ ಪೇದೆ ಬರೆದುಕೊಳ್ಳುತ್ತಾರೆ. ಕೆಲವು ಬಾರಿ ಪೇದೆಗಳೂ ತಪ್ಪಾಗಿ ನಮೂದಿಸುತ್ತಾರೆ. ಒಂದು ಪದವನನ್ನ ಹಿಡಿದು ವಿವಾದ ಮಾಡುವುದು ಸರಿಯಲ್ಲ ಎಂದರು.
ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದೇ ಸಮಾಜದ ಮಾತು ಕೇಳಿ ಆಯ್ಕೆಯಾಗಲು ಸಾಧ್ಯವಾಗುವುದಿಲ್ಲ ಎಂದರು. ಆನಂದ ಸಿಂಗ ಅರಣ್ಯ ಖಾತೆ ಅಪಸ್ವರ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ, ನಾನು ಪಕ್ಷದಲ್ಲಿ ಹಿರಿಯ ನಾಯಕನಾದರೂ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಹಿರಿಯ ನಾಯಕರು ಎಷ್ಟೋ ಜನ ಮೂಲೆಗುಂಪಾಗಿದ್ದಾರೆ. ಈ ಬಗ್ಗೆಯೂ ನಾನೇನೂ ಹೇಳಿಕೆ ನೀಡುವುದಿಲ್ಲ ಎಂದರು.