ವಿಜಯಪುರ : ಆರೋಪಿಗಳು ಯಾರೇ ಆಗಿರಲಿ, ಎಂಥವರೇ ಇರಲಿ, ಮುಂದೆ ಒಂದು ದಿನ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ. ಅದರಲ್ಲೂ ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗಲಾರರು. ಇಡಿ ಕೈಗೆ ಸಿಕ್ಕವರ ವಿರುದ್ಧ ಈಗಿಲ್ಲದಿದ್ರೂ ಇನ್ನು ಹತ್ತು ವರ್ಷಕ್ಕೆ ನಿಶ್ಚಿತವಾಗಿ ಕ್ರಮ ಆಗೇ ಆಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಮೊನ್ನೆ ಒಬ್ಬ ಬಸ್ ಕಂಡೆಕ್ಟರ್ ಸಿಕ್ಕಿದ್ದಾರೆ. ಅವರ ಮನೆಯಲ್ಲಿ ಸಾವಿರಾರು ಕೋಟಿ ಜಪ್ತಿ ಮಾಡಲಾಗಿದೆ. ಅದು ಯಾರ ದುಡ್ಡು? ಅಧಿಕಾರಿಗಳು ಅದನ್ನು ಬಹಿರಂಗಪಡಿಸಬೇಕು.
ಓರ್ವ ಬಸ್ ಕಂಡಕ್ಟರ್ ಮನೆಯಲ್ಲಿ ದಾಖಲೆ ಇಲ್ಲದೇ ಸಾವಿರಾರು ಕೋಟಿ ರೂ. ಇದೆ ಅಂದ್ರೆ ಅಂಥಹ ಕಳ್ಳರೆಲ್ಲ ಒಳಗೆ ಹೋಗಬೇಕು. ರಾಜ್ಯದ ಜನರ ಬೊಕ್ಕಸ ಲೂಟಿ ಮಾಡಿ, ದೇಶ-ವಿದೇಶದಲ್ಲಿ ಆಸ್ತಿ ಮಾಡುವ ರಾಜಕಾರಣಿಗಳಿಗೆಲ್ಲ ಶಿಕ್ಷೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ತಡವಾದರೆ ತಾವು ಸಚಿವರಾಗಲು ಸಾಧ್ಯವಿಲ್ಲ: ಬಸನಗೌಡ ಪಾಟೀಲ ಯತ್ನಾಳ್
ಪ್ರಧಾನಿ ಮೋದಿ ಅವರು ಅದನ್ನೇ ಹೇಳಿದ್ದಾರೆ. ನಾ ಖಾವುಂಗಾ, ನಾ ಖಿಲಾವುಂಗಾ ಎಂಬುದು ಮೋದಿ ಅವರ ಘೋಷವಾಖ್ಯವಿದೆ. ಅದರಂತೆ ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಪ್ರಕ್ಷದವರು ಇದ್ದರೂ ಒಳಗೆ ಹೋಗಬೇಕು ಎಂಬುದು ನನ್ನ ಸ್ಪಷ್ಟವಾದ ವೈಯಕ್ತಿಕ ನಿಲುವು ಆಗಿದೆ ಎಂದರು.
ಬಜೆಟ್ ಉತ್ತಮ : ಕೇಂದ್ರ ಬಜೆಟ್ನಲ್ಲಿ ನದಿ ಜೋಡಣೆಗೆ ಒತ್ತು ಕೊಟ್ಟಿರೋದು ಬಹಳ ಒಳ್ಳೆಯ ವಿಚಾರ. ಇದು ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ನದಿ ಜೋಡನೆ, ರೈಲ್ವೆ ಜೋಡಣೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವುದು ವಾಜಪೇಯಿ ಅವರ ಆಸೆ ಮತ್ತು ಕನಸು ಆಗಿತ್ತು. ಈ ಬಜೆಟ್ನಿಂದ ಅದು ಈಡೇರಿದೆ ಎಂದರು.
ನಾನು ಬಹಳ ದಿನಗಳ ಹಿಂದೆ ಪ್ರಧಾನಿ ಮೋದಿ ಅವರಿಗೆ ನದಿ ಜೋಡಣೆ ಬಗ್ಗೆ ಪತ್ರ ಬರೆದಿದ್ದೆ. ದೇಶದಲ್ಲಿ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲ ಇರುತ್ತದೆ. ನದಿ ಜೋಡಣೆಯಿಂದ ರೈತರಿಗೆ ಅನುಕೂಲ ಆಗಲಿದೆ. ಇದರಿಂದ ಹಲವು ಸಮಸ್ಯೆಗಳಿಂದ ಮುಕ್ತರಾಗುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದೆ. 2022ರ ಬಜೆಟ್ನಲ್ಲಿ ಈ ಬಗ್ಗೆ ಗಮನ ಹರಿಸಿದ್ದು, ಬಹಳ ಒಳ್ಳೆಯ ನಿರ್ಣಯ ಎಂದು ಪ್ರಧಾನಿ ಮೋದಿ ಅವರ ಸಾಧನೆ ಕೊಂಡಾಡಿದರು.
ಡಿಕೆಶಿ ವಿಚಾರ : ಸಚಿವ ಆನಂದ್ ಸಿಂಗ್ ಮತ್ತು ಡಿಕೆಶಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಎಲ್ಲಿ ಹೋಗ್ತಾರೆ ಅಂತಾ ಹೇಳುವುದು ಕಷ್ಟ. ಇದನ್ನು ಕಾದು ನೋಡೋಣ. ಆನಂದ್ ಸಿಂಗ್ ವಿಜಯನಗರ ಜಿಲ್ಲೆಯಾದ ಮೇಲೆ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಸ್ವಾಭಿಮಾನಿ ಮನುಷ್ಯ.
ಎಲ್ಲೋ ಒಂದೆಡೆ ನೋವಾಗಿರಬೇಕು. ನಮ್ಮ ಪಕ್ಷದ ನಾಯಕರು ಕೂಡಿ ಚರ್ಚೆ ಮಾಡ್ತಾರೆ. ನಾನು ನೋಡಿದಂತೆ ಆನಂದ್ ಸಿಂಗ್ ಓರ್ವ ಒಳ್ಳೆಯ ರಾಜಕಾರಣಿ. ಅವರನ್ನು ಉಳಿಸಿಕೊಳ್ಳಬೇಕಾಗಿರೋದು ನಮ್ಮ ಪಕ್ಷದ ಜವಾಬ್ದಾರಿ. ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಅವರಿಗೆ ಪ್ರೆಸ್ಟೀಜ್ ಇಶ್ಯೂ ಆಗಿದೆ ಅಷ್ಟೇ.. ಬೇರೇನೂ ಇಲ್ಲ. ಅದನ್ನು ನಮ್ಮ ರಾಜ್ಯದ ನಾಯಕರು ಕುಳಿತುಕೊಂಡು ಶೀಘ್ರದಲ್ಲೇ ರಿಪೇರಿ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ದೇಣಿಗೆ ಸಂಗ್ರಹ : ಪಕ್ಷ ಸಂಘಟನೆಗೆ ಬಿಜೆಪಿ ದೇಣಿಗೆ ಸಂಗ್ರಹಕ್ಕೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ದೇಣಿಗೆ ಸಂಗ್ರಹ ಕಾನೂನಾತ್ಮಕವಾಗಿದೆ. ಮೋದಿ ಅವರು ಭ್ರಷ್ಟಾಚಾರ ಮಾಡಿದ್ದಾರೆಂದು ಈ ದೇಶದಲ್ಲಿರೋ ಯಾವೊಬ್ಬನೂ ಹೇಳಿಲ್ಲ.
ಕುಮಾರಸ್ವಾಮಿ ಹೇಳ್ತಾರೆ ಅಂದ್ರೆ ಪಾಪಾ ಅವ್ರಿಗೆ ಯಾವ ಕನಸು ಬಿದ್ದಿದೆ ಗೊತ್ತಿಲ್ಲ. ನರೇಂದ್ರ ಮೋದಿ 7 ವರ್ಷದಲ್ಲಿ ಒಂದು ಭ್ರಷ್ಟಾಚಾರ ಆರೋಪವಿಲ್ಲದ ಮನುಷ್ಯ. ಸಚಿವ ಸಂಪುಟ ಸಚಿವರು ಒಬ್ಬರೂ ಭ್ರಷ್ಟಾಚಾರ ಆರೋಪದ ಮೇಲೆ ರಾಜೀನಾಮೆ ಕೊಟ್ಟಿಲ್ಲ. ಇದು ಮೋದಿ ಎಷ್ಟು ಪಾರದರ್ಶಕವಾಗಿ ಆಡಳಿತ ನಡೆಸುತ್ತಾರೆ ಅನ್ನೋದನ್ನು ತೋರಿಸುತ್ತದೆ. ಕುಮಾರಸ್ವಾಮಿ ಅಂತಹವರು ಪ್ರಧಾನಿ ಮೋದಿ ಬಗ್ಗೆ ಮಾತನಾಡಬಾರದು. ಪ್ರಧಾನಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದರು.
ಹಿಜಾಬ್ ವಿವಾದ : ಉಡುಪಿಯಲ್ಲಿನ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿದ ವಿಚಾರ. ನಮ್ಮ ದೇಶದ ಸಂವಿಧಾನ, ಕಾನೂನು, ಸರ್ಕಾರದ ಆದೇಶಗಳನ್ನು ಎಲ್ಲ ಸಮುದಾಯದವರೂ ಪಾಲಿಸಬೇಕು. ಯಾವುದೇ ಸಮುದಾಯ ಅದನ್ನು ಮೀರಬಾರದು. ಅಂತಹ ಸಮುದಾಯ ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ ಎಂದರು.