ವಿಜಯಪುರ : ಮಾಜಿ ಪಿಎಂ ದೇವೇಗೌಡ ಭೇಟಿ ಹಿನ್ನೆಲೆ ಪ್ರೀತಂಗೌಡ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರೀತಂಗೌಡಗೆ ಕಸವಿಸಿಯಾಗುವುದು. ಅವರು ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಗೆದ್ದವರು. ದೇವೇಗೌಡರ ಭೇಟಿ ಬಗ್ಗೆ ನನಗೆ ಆಕ್ಷೇಪವಿಲ್ಲ ಎಂದರು.
ಮಾಜಿ ಪ್ರಧಾನಿಯವರನ್ನು ಭೇಟಿ ಮಾಡುವುದು ತಪ್ಪೇನಲ್ಲ. ಕೇವಲ ದೇವೇಗೌಡರನ್ನಷ್ಟೇ ಭೇಟಿಯಾಗಿದ್ದು ಸರಿಯಲ್ಲ. ಸಿಎಂ ಬೊಮ್ಮಾಯಿ ಗೌರವಯುತವಾಗಿ ಎಲ್ಲ ಮಾಜಿ ಸಿಎಂಗಳ ಮನೆಗೆ ಹೋಗಿ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ದೇವೇಗೌಡರ ಮನೆಗಷ್ಟೇ ಹೋಗಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದರು.
ಸಿಎಂ ಭೇಟಿಯ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು, ಸಿಎಂ ಬೊಮ್ಮಾಯಿಗೆ ಸರ್ಕಾರ ನಡೆಸಲು ಆಶ್ರಯ ಬೇಕಿದೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಲಗಿದ್ದ ಮಗು ಚಿವುಟಿ ಅಳುವಂತೆ ಮಾಡ್ತಾರೆ : ಯಾಕೆ ಆನಂದು ಅಳ್ತಿಯಾ?, ಯಾಕೆ ರೇಣುಕಾ ಅಳ್ತಿಯಾ?, ಯಾಕೆ ಪ್ರೀತಂ, ಯಾಕೆ ಅಳ್ತಿಯಾ? ಎಂದು ಚಿವುಟಿ ಕೇಳ್ತಾರೆ. ಬೊಮ್ಮಾಯಿ ಬೈದಾಗ ಯಾಕೆ ಬೈದ್ರಿ ಎಂದು ಮತ್ತೆ ಅವರಿಗೆ ಕೇಳಿ ಚಿವುಟುತ್ತಾರೆ ಎಂದು ಲೇವಡಿ ಮಾಡಿದರು.
ಆನಂದ್ ಸಿಂಗ್ ಅಸಮಾಧಾನ : ಖಾತೆ ಹಂಚಿಕೆ ಬಗ್ಗೆ ಸಚಿವ ಆನಂದ್ ಸಿಂಗ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಆನಂದ್ ಸಿಂಗ್ ಉತ್ತಮ ಆಡಳಿತಗಾರ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸರ್ಕಾರ ರಚನೆ ಮಾಡಲು ಆನಂದ್ ಸಿಂಗ್ ಪಾತ್ರ ಬಹಳ ಪ್ರಮುಖ. ಈ ಹಿಂದೆ ಅರಣ್ಯ ಇಲಾಖೆಯಲ್ಲಿದ್ದ ಹಲವು ಸಮಸ್ಯೆಗಳನ್ನು ಆನಂದ್ ಸಿಂಗ್ ಬಗೆಹರಿಸಿದ್ದಾರೆ. ಆನಂದ್ ಸಿಂಗ್ ಸಮರ್ಥವಾಗಿ ಖಾತೆಗಳನ್ನು ನಿಭಾಯಿಸಿದ್ದಾರೆ. ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳು ಪೂರೈಸಬೇಕು ಎಂದರು.
2ಎ ಮೀಸಲಾತಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ವಿಚಾರ ಕುರಿತು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಾವು ಪಂಚಮಸಾಲಿ ಸಮಾಜ ಅಷ್ಟೇಯಲ್ಲ, ಆದಿ ಬಣಜಿಗ, ಒಕ್ಕಲಿಗ, ಕುರುಬ, ವಾಲ್ಮೀಕಿ, ಮಡಿವಾಳ ಸಮಾಜಗಳ ಬೇಡಿಕೆ ಈಡೇರಿಕೆಗೆ ಬೆಂಬಲಿಸಿದ್ದೇವೆ. ನಿನ್ನೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು.
ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ನೀಡಿದ್ದಾರೆ. ಪ್ರಧಾನಿಗಳ ಈ ಐತಿಹಾಸಿಕ ತಿದ್ದುಪಡಿ ಸ್ವಾಗತಾರ್ಹ. ಮೀಸಲಾತಿ ವಿಚಾರವಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುವೆ. ಈಗ ಯಾವುದೇ ನೆಪ ಹೇಳಲು ಬರಲ್ಲ. ಆದಷ್ಟು ಬೇಗ ಪಂಚಮಸಾಲಿ ಸಮಾಜ, ಆದಿ ಬಣಜಿಗ, ಕೂಡು ಒಕ್ಕಲಿಗ ಸಮಾಜಗಳಿಗೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ : ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಎಸ್ಸಿ ಸಮಾಜದ ಮೀಸಲಾತಿಯನ್ನು ಮೂರು ಪ್ರತಿಶತದಿಂದ 7.5 ಪ್ರತಿಶತಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಜೊತೆಗೆ ಮಡಿವಾಳ, ಹಡಪದ, ಗಂಗಾಮತ, ತಳವಾರ ಸಮಾಜಗಳನ್ನು ಎಸ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಅವರು ಕ್ರಮಕೈಗೊಳ್ಳದಿದ್ದರೆ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಹೋರಾಟಕ್ಕೆ ಯಾರಾದರೂ ಬರಲಿ, ಬಿಡಲಿ ನಮ್ಮ ಹೋರಾಟ ನಡೆಯುತ್ತದೆ. ಆಯಾ ಸಮುದಾಯದ ನಾಯಕರು ಶಾಸಕರು ಬರದಿದ್ದರೆ, ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಯತ್ನಾಳ್ ಗುಡುಗಿದರು.