ವಿಜಯಪುರ: ರಾಜ್ಯ ಸಂಪುಟ ವಿಸ್ತರಣೆ ಆಗುತ್ತೋ ಇಲ್ಲ ಪುನಾರಚನೆ ಆಗುತ್ತೋ ಗೊತ್ತಿಲ್ಲ. ಹೈಕಮಾಂಡ್ ಸಿಎಂ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ನಾನು ಮಾತ್ರ ಬಿಎಸ್ವೈ ಸಂಪುಟದಲ್ಲಿ ಮಂತ್ರಿಯಾಗುವುದಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ಪಷ್ಟಪಡಿಸಿದರು.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮಾತ್ರ ಈ ಬಾರಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ಪ್ರಾದೇಶಿಕವಾರು, ಜಿಲ್ಲಾವಾರು ಸಭೆ ನಡೆಸಲು ಸೂಚಿಸಿದಂತೆ ಸಿಎಂ ಸಭೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಯಾವ ರೀತಿ ಪರಿಗಣಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದರು.
ಓದಿ: ಬಿಜೆಪಿ 150 ಸ್ಥಾನ ಗೆಲ್ಲುತ್ತೆ, ಕಾಂಗ್ರೆಸ್ ಅಡ್ರೆಸ್ ಇರಲ್ಲ: ರೇಣುಕಾಚಾರ್ಯ ಭವಿಷ್ಯ
ಪ್ರಧಾನಿಗೆ ದೊಡ್ಡ ನೆಟ್ವರ್ಕ್ ಇದೆ. ಯಾವ ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ ಎಂಬ ವಿಷಯ ಅವರಿಗೆ ಗೊತ್ತಾಗುತ್ತದೆ. ಮುಂದಿನ ಬಿಜೆಪಿ ನಾಯಕನಾಗಿ ಯಾರನ್ನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಬಿಎಸ್ವೈ ನಂತರದ ಸ್ಥಾನದ ಬಗ್ಗೆ ಮಾತನಾಡಿದರು. ನನ್ನ ವಿರುದ್ಧ ಪಕ್ಷ ಯಾವುದಕ್ಕೆ ಕ್ರಮ ಕೈಗೊಳ್ಳಬೇಕು. ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.