ವಿಜಯಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ನಿಮ್ಮ ಯುಗ ಅಂತ್ಯವಾಗಿದೆ. ಇಂದಿನಿಂದ ಹೊಸ ಬಿಜೆಪಿ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಆರಂಭವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ಅವರನ್ನು ‘ಸಿಡಿ’ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಮೂವರು ಸಚಿವರಾಗುತ್ತಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಅವರಿಗೆ ಹಣ ಸಂದಾಯ ಮಾಡುವ ಮೂಲಕ ಸಚಿವರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಬಿಎಸ್ವೈ ಅವರೇ ನಿಮ್ಮ ಕುಟುಂಬ ಕರ್ನಾಟಕದಲ್ಲಿ ಬಿಜೆಪಿಯನ್ನು ಹೈಜಾಕ್ ಮಾಡಿ, ಕೇಂದ್ರ ನಾಯಕರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ವೀರಶೈವ ಲಿಂಗಾಯತ ಸಮುದಾಯ ನಿಮ್ಮ ಜತೆ ಇದೆ ಎಂದು ನಮ್ಮ ಸಮಾಜದವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ. ಸಮುದಾಯದ ಹೆಸರು ಹೇಳಿಕೊಂಡು ಕೇಂದ್ರ ನಾಯಕರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ಬಿಡಿ. ನಿಮ್ಮ ಜತೆ ಲಿಂಗಾಯತ ಸಮುದಾಯವಿಲ್ಲ. ಸಮುದಾಯದ ಹೆಸರು ಹೇಳಿಕೊಂಡು ಸಮಾಜದ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಯತ್ನಾಳ್ ಕಿಡಿಕಾರಿದರು.
ಇಂದು ಸಚಿವರಾಗುತ್ತಿರುವ ಮೂವರು ಈ ಹಿಂದೆ ಸಿಎಂ ಬಿಎಸ್ ವೈ ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸೋಣ ನಮ್ಮ ಜತೆ ಕೈ ಜೋಡಿಸಿ ಎಂದಿದ್ದರು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ ಎಂದು ವಿಜಯಪುರ ಶಾಸಕ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟರು.
ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, ದುಡ್ಡು ಸಂದಾಯ ಮಾಡಿದವರು ಮಾತ್ರ ಸಚಿವರಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು.
ಇದನ್ನೂ ಓದಿ: ಅರುಣ್ ಸಿಂಗ್ ಭೇಟಿಯಾದಬಿಎಸ್ವೈ; ಅರಮನೆ ಮೈದಾನದತ್ತ ಉಭಯ ನಾಯಕರು