ವಿಜಯಪುರ: ಕೆಲವು ಹಿರಿಯರು ನಿನಗೆ ಸಿಎಂ ಆಗುವ ಆವಕಾಶವಿದೆ, ಮಾತಿನ ಮೇಲೆ ಹಿಡಿತ ಸಾಧಿಸು ಎಂದು ಹೇಳುತ್ತಿರುತ್ತಾರೆ. ಹಾಗೆ ನೋಡಿದರೆ ಮುಂದೊಂದು ದಿನ ನಾನು ಸಿಎಂ ಆದ್ರೂ ಆಶ್ಚರ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ನಗರದ ದರ್ಬಾರ್ ಕಾಲೇಜು ಒಳಾಂಗಣದಲ್ಲಿ ನಡೆದ ಸಮಸ್ತ ಬ್ರಾಹ್ಮಣ ಸಮುದಾಯದ ಪೇಜಾವರ ಶ್ರೀ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಿಎಂ ಆಗಬೇಕು ಎಂದು ಅನೇಕರು ಹೇಳುತ್ತಿರುತ್ತಾರೆ. ಅದು ನೆರವೇರುವ ಕಾಲ ಬರಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊನ್ನೆ ಸದನದಲ್ಲಿ ಸಾವರ್ಕರ್ ವಿಚಾರವಾಗಿ ಕ್ಷೇಮೆ ಕೇಳುವಂತೆ ಕೆಲವರು ಪಟ್ಟು ಹಿಡಿದರು, ಆದ್ರೆ ನಾನು ರಾಜಕೀಯ ಬಿಡುತ್ತೇನೆ ಹೊರೆತು ಕ್ಷಮೆ ಕೇಳೋದಿಲ್ಲ ಎಂದು ಸಿಎಂಗೆ ಹೇಳಿದೆ. ಹಿಂದೆ ತೇಜಸ್ವಿನಿ ಅನಂತಕುಮಾರ ಅವರಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದೆ. ಜನರಿಗೆ ಕಷ್ಟ ಬಂದಾಗ ಸಂಘರ್ಷ ಮಾಡುತ್ತೇನೆ ಹೊರತು ಮೂಕ ಬಸವಣ್ಣನಾಗಿ ಕೂರುವುದಿಲ್ಲ ಎಂದು ತಿಳಿಸಿದ್ದಾರೆ.
ಮೊನ್ನೆ ಅಧಿವೇಶನದಲ್ಲಿ ನಮ್ಮ ಭಾಗಕ್ಕೆ ಹೆಚ್ಚಿನ ಅನುದಾನ ನೀಡದ ಕಾರಣ ನಾನು ಚರಂತಿಮಠ ಹಾಗೂ ಅಭಯ ಪಾಟೀಲ್ ಸದನದಿಂದ ಹೊರ ನಡೆದೆವು. ಬಳಿಕ ಸಿಎಂ ಪೋನ್ ಮಾಡಿ 10 ಸಾವಿರ ಕೋಟಿ ರೂಗಳನ್ನು ಕೃಷ್ಣ ನೀರಾವರಿ ಯೋಜನೆಗೆ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು ಎಂದು ತಿಳಿಸಿದರು.
ರಾಜ್ಯಕ್ಕೆ ಅನಂತಕುಮಾರ ಅವ್ರ ಕೊಡುಗೆ ಅಪಾರ. ಕರ್ನಾಟಕ ಅಭಿವೃದ್ಧಿ ವಿಚಾರ ಬಂದಾಗ ಪಕ್ಷಬೇಧ ಮರೆತು ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮದಿಂದ ಆಲಮಟ್ಟಿ ಜಲಾಶಯದ ಎತ್ತರ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕಾಮಗಾರಿಗಳಾಗಿವೆ ಎಂದು ಹೊಗಳಿದರು.
ಇನ್ನೂ ಪೇಜಾವರ ಶ್ರೀಗಳಿಗೆ ರಾಮ ಮಂದಿರ ಹೋರಾಟ, ಜಮ್ಮು ಕಾಶ್ಮೀರದ ಬಗ್ಗೆ ಅಪಾರ ಕಾಳಜಿಯಿತ್ತು. ಅವ್ರ ಹೋರಾಟದಿಂದ ಇಂದು ರಾಮ ಮಂದಿರ ಕಟ್ಟುವ ಕಾಲ ಸನಿಹವಾಗಿದೆ ಎಂದು ಅಭಿಪ್ರಾಯಪಟ್ಟರು.