ವಿಜಯಪುರ: ಕೊನೆಗೂ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಾಯಕತ್ವ ವಿರೋಧಿ ಹೇಳಿಕೆಗೆ ಕೇಂದ್ರ ಬಿಜೆಪಿ ಮುಖಂಡರು ತಾತ್ಕಾಲಿಕವಾಗಿ ಬೀಗ ಹಾಕಿರುವುದು ಸ್ಪಷ್ಟವಾಗಿದೆ. ಇಂದು ತಮ್ಮ ಫೇಸ್ಬುಕ್ ಪೋಸ್ಟ್ ಸಿಎಂ ಹಾಗೂ ಅವರ ಪುತ್ರನ ವಿರುದ್ಧ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಯತ್ನಾಳ್ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಹಣದಿಂದ ಕೆಲವು ನಾಯಕರನ್ನು ಖರೀದಿಸಬಹುದು. ಆದರೆ, ನೈತಿಕತೆ ಇರುವವರನ್ನು, ಮೌಲ್ಯ ಉಳ್ಳವರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಡೇಂದ್ರ ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಮಾರ್ಮಿಕವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೂರು ದಿನ ಕಾಲ ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್, ಸಿಎಂ ಪರ - ವಿರೋಧ ಶಾಸಕರ ಜತೆ ಮಾತುಕತೆ ನಡೆಸಿ ಹೋಗಿದ್ದರು. ಈ ವೇಳೆ ಶಾಸಕ ಯತ್ನಾಳ ಅರುಣ್ ಸಿಂಗ್ ಅವರನ್ನು ಭೇಟಿಯಾಗಿರಲಿಲ್ಲ. ಇದಕ್ಕೆ ಯತ್ನಾಳ್ ಫೇಸ್ಬುಕ್ ಮೂಲಕವೇ ಪೋಸ್ಟ್ ಮಾಡಿ ಅವರನ್ನು ಭೇಟಿಯಾಗಲು ತಾವು ಸಮಯ ಕೇಳಿಲ್ಲ ಎನ್ನುವ ಮೂಲಕ ಅರುಣ್ ಸಿಂಗ್ ಅವರ ವಿರುದ್ಧವೇ ಪರೋಕ್ಷವಾಗಿ ಅಸಮಾಧಾನ ತೋಡಿ ಕೊಂಡಿದ್ದರು.
ಈಗ ಮತ್ತೊಮ್ಮೆ ಫೇಸ್ಬುಕ್ ಮೂಲಕ ಎಡೇಂದ್ರ ಎನ್ನುವ ಶಬ್ದ ಬಳಸುವ ಮೂಲಕ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರನ್ನು ಜೋಡಿಸಿ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಎಲ್ಲರನ್ನು ಕೆಲವು ಕಾಲ ಮೋಸ ಮಾಡಬಹುದು, ಕೆಲವರನ್ನು ಎಲ್ಲ ಕಾಲದಲ್ಲಿಯೋ ಮೋಸ ಮಾಡಬಹುದು. ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಮೋಸ ಮಾಡಲು ಸಾಧ್ಯವಿಲ್ಲ ಎನ್ನುವ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಕೆನಡಿಯ ಹೇಳಿಕೆಯನ್ನು ಪ್ರಸ್ತಾಪಿಸಿದರು.
ಕೆಲ ಸ್ವಾಮೀಜಿ, ಮಾಧ್ಯಮ ಹಾಗೂ ಕೆಲ ನಾಯಕರನ್ನು ಖರೀದಿಸಬಹುದು. ಆದರೆ ಮೌಲ್ಯ, ನೈತಿಕತೆ ಇರುವ ಜನರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಿ ಪರೋಕ್ಷವಾಗಿ ಸಿಎಂ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಹೈ ಕಮಾಂಡ್ ಸಿಎಂ ಹಾಗೂ ಅವರ ಪುತ್ರನ ವಿರುದ್ಧ ನೇರವಾಗಿ ಮಾತನಾಡದಂತೆ ಸೂಚನೆ ನೀಡಿದರೂ, ಅವರು ಮಾತ್ರ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಫೇಸ್ಬುಕ್ ಪೋಸ್ಟ್ ಮಾಡುವ ಮೂಲಕ ಹೊರ ಹಾಕಿದ್ದಾರೆ.