ವಿಜಯಪುರ: ಶೂಟೌಟ್ ಪ್ರಕರಣವೊಂದರ ಆರೋಪಿಯೊಬ್ಬ ಹಾಡುಹಗಲೇ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಿಂದಗಿ ನಗರದ ಸಂಗಮ ಬಾರ್ ಬಳಿ ನಡೆದಿದೆ.
ಸಿಂದಗಿ ನಗರದ ಸಂಗಮ ಬಾರ್ ಬಳಿ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಸಿಂದಗಿಯ ಮುರ್ತೂಜಾ ಬಳಗಾನೂರ (42) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ.
ಚೂರಿ ಇರಿತದಿಂದ ತೀವ್ರ ಗಾಯಗೊಂಡಿರುವ ಮುರ್ತೂಜಾ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿಶೀಟರ್ ಸಮೀರ್ ಊರ್ಫ್ ಬಾಡಿ ಬಿಲ್ಡರ್ ಸಮ್ಯಾ ಕೆಲ ವರ್ಷಗಳ ಹಿಂದೆ ವಿಜಯಪುರದ ಫಯಾಜ್ ಮುಶ್ರಿಫ್ ಶೂಟೌಟ್ ಪ್ರಕರಣದಲ್ಲೂ ಆರೋಪಿಯಾಗಿದ್ದ. ಮಕ್ಕಳಿಬ್ಬರ ಜಗಳದಲ್ಲಿ ಎಂಟ್ರಿ ಕೊಟ್ಟ ಸಮ್ಯಾ, ಮುರ್ತೂಜಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಬಾಡಿ ಬಿಲ್ಡರ್ ಸಮ್ಯಾ ವಿರುದ್ಧ ದೂರು ದಾಖಲಾಗಿದೆ.