ವಿಜಯಪುರ: ಮಾಸಿಕ 12 ಸಾವಿರ ವೇತನ, ಕೋವಿಡ್ ಸುರಕ್ಷತಾ ಕಿಟ್ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರ ಸಂಘಟನೆಯ ಕಾರ್ಯಕರ್ತರು, ನಾವು ಕೊರೊನಾ ಭೀತಿ ನಡುವೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಾಸಿಕ ₹12000 ವೇತನ ನೀಡುವಂತೆ ಕಳೆದ 15 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದೇವೆ. ಆದರೂ ರಾಜ್ಯ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕೊರೊನಾ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಈವರಿಗೂ ಪಿಪಿಇ ಕಿಟ್, ಮಾಸ್ಕ್ ಸೇರಿ ಯಾವುದೇ ಸಾಮಗ್ರಿಗಳನ್ನೂ ನೀಡಿಲ್ಲ. ಕಡಿಮೆ ಸಂಭಾವನೆ ಪಡೆಯುತ್ತಾ ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದರೂ ಸರ್ಕಾರ ನಮಗಾಗಿ ಯಾವ ಯೋಜನೆಗಳನ್ನು ನೀಡುತ್ತಿಲ್ಲ. ಹೀಗಾಗಿ ನಮಗೆ ಸೂಕ್ತ ರಕ್ಷಣೆ ಹಾಗೂ ಕಾಲ ಕಾಲಕ್ಕೆ ಸೂಕ್ತ ವೇತನ ನೀಡಬೇಕು ಎಂದು ಪ್ರತಿಭಟನಾಕಾರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.