ಮುದ್ದೇಬಿಹಾಳ (ವಿಜಯಪುರ): ಇಂಡಿ ತಾಲೂಕಿನ ತಾಂಬಾ ಗ್ರಾಮದ ಪ್ರಾಥಮಿಕ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತ್ ಸದಸ್ಯನ ನಡುವಿನ ಸರಸ ಸಲ್ಲಾಪ ಪ್ರಕರಣ ಸಂಬಂಧ ಆಶಾ ಕಾರ್ಯಕರ್ತೆಯನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜ್ಕುಮಾರ್ ಮಾಹಿತಿ ನೀಡಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಗೃಹ ಕಚೇರಿಗೆ ಬುಧವಾರ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತ್ ಸದಸ್ಯನ ಚುಂಬನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಇಂಡಿ ಉಪವಿಭಾಗಾಧಿಕಾರಿ ಸಿಂಧೆ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಸದ್ಯಕ್ಕೆ ಆಶಾ ಕಾರ್ಯಕರ್ತೆಯನ್ನು ಸೇವೆಯಿಂದ ತೆಗೆದು ಹಾಕಲಾಗಿದ್ದು ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿದೆ ಎಂದರು.
ಲಿಸಿಕೆ ವಿತರಣೆಗೆ ಖಾಸಗಿ ಶಾಲಾ ವಾಹನಗಳ ಸೇವೆ
ಕೋವಿಡ್ ವ್ಯಾಕ್ಸಿನ್ ಹಾಕುವ ಗುರಿಯನ್ನು ಹೆಚ್ಚಿಸಲು ಖಾಸಗಿ ಶಾಲೆಯ ವಾಹನಗಳ ಬಳಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಸರಾಸರಿ 20 ಪಾಸಿಟಿವ್ ಕೇಸ್‌ಗಳು ಬರುತ್ತಿವೆ. ಗಡಿ ಭಾಗದಲ್ಲಿ ಆರ್‌ಟಿಪಿಸಿಆರ್ ಕಡ್ಡಾಯಗೊಳಿಸಿದ್ದು, ನೆಗೆಟಿವ್ ವರದಿ ಇದ್ದರಷ್ಟೇ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ ಎಂದರು. ಕೋವಿಡ್ ಬಗ್ಗೆ ಮಾಧ್ಯಮಗಳು ಹೆಚ್ಚಿನ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.