ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಲು ನಿನ್ನೆ ಯೋಧರ ಬಳಿ ಗಡಿ ಭಾಗಕ್ಕೆ ಹೋಗಿದ್ದಕ್ಕೆ ಸಂತಸ ಪಡುತ್ತೇನೆ. ಆದರೆ ಚೀನಾ ನಮ್ಮ ಗಡಿಯೊಳಗೆ ಬಂದಿದ್ದರ ಕುರಿತು ಅವರು ಮಾತನಾಡಿಲ್ಲ ಎಂದು ವಿಜಯಪುರ ನಗರದಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಟೀಕಿಸಿದರು.
ಭಾರತದ ಗಡಿ ಭಾಗದ ಡೆಪ್ಸಾಂಗ್ ಹಾಗೂ ಡೆಪ್ಚಾಕ್ ಭಾಗದಲ್ಲಿ ಚೀನಾ ನಮ್ಮ ನೆಲ ಆಕ್ರಮಿಸಿಕೊಂಡಿದೆ. ಈ ಕುರಿತು ಪ್ರಧಾನಿ ವಾರ್ನ್ ಮಾಡಬೇಕಿತ್ತು. ಬೇರೆ ದೇಶಗಳ ಹೆಸರನ್ನು ತೆಗೆದುಕೊಳ್ಳುವ ಅವರು ಚೀನಾ ಹೆಸರು ಮಾತ್ರ ತೆಗೆದುಕೊಳ್ಳುತ್ತಿಲ್ಲ ಎಂದರು.
ದೇಶದಲ್ಲಿರುವ ವೈರತ್ವವನ್ನು ಹೋಗಲಾಡಿಸಬೇಕು. ನಿರುದ್ಯೋಗ ಸಮಸ್ಯೆ ಯಾಕೆ ಹೆಚ್ಚಿದೆ ಎಂಬುದನ್ನು ಆಲೋಚಿಸಬೇಕು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದೇಕೆ ಎಂದು ತಿಳಿಯಬೇಕು ಎಂದು ಓವೈಸಿ ಹೇಳಿದರು.
ಯತ್ನಾಳ್ ವಿರುದ್ಧ ಕಿಡಿ: ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ, ಶಾಸಕ ಯತ್ನಾಳ್ ಪದೇ ಪದೆ ಆ ದೇಶದ ಹೆಸರು ಉಲ್ಲೇಖ ಮಾಡ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಯಾಕಿದೆ ಎಂದು ಅವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಯತ್ನಾಳ್ಗೆ ಹೇಳಿಕೊಟ್ಟಿರಬಹುದು ಎಂದು ಆರೋಪಿಸಿದರು.
ಹಿಜಾಬ್ ಕೋರ್ಟ್ ತೀರ್ಪು ವಿಚಾರ: ಹಿಜಾಬ್ ಪರ ತೀರ್ಪು ಬಂದಿದ್ದು ಸಂತಸ ತಂದಿದೆ. ತೀರ್ಪಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಮುಸ್ಲಿಮರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ. ಸಬ್ ಕಾ ವಿಕಾಸ, ಸಬ್ ಕಾ ಸಾಥ್ ಬರೀ ಅವರ ಮಾತಿನಲ್ಲಿ ಇದೆಯೇ ಹೊರತು ಕೃತಿಯಲ್ಲಿಲ್ಲ. ಬಿಜೆಪಿ ಹಲಾಲ್ ಕಟ್ ಮಾಡಿ ತಮ್ಮ ಕಮಿಷನ್ ಮಾಡಿಕೊಳ್ಳುತ್ತಿದೆ ಎಂದೂ ಇದೇ ಸಂದರ್ಭದಲ್ಲಿ ಓವೈಸಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 2024ರ ಜನವರಿಯಲ್ಲಿ ಶ್ರೀರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತ