ವಿಜಯಪುರ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು 6 ಲಕ್ಷ ರೂ.ಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದ. ಇದೀಗ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬಬಲೇಶ್ವರದ ಪೈಗಂಬರ ದಸ್ತಗಿರಿಸಾಬ ಗೋಕಾಂವಿ, ಪೈಗಂಬರ ರಾಜೇಸಾಬ್ ಕೋಲೂರ, ಸಾರವಾಡದ ಚಂದ್ರಕಾಂತ ಅಶೋಕ ಪುನ್ನಣ್ಣವರ, ಸಾಗರ ಹಣಮಂತ ಸಂಜೀವಗೋಳ ಎಂಬುವವರನ್ನ ಬಂಧಿಸಲಾಗಿದೆ. ಈ ಆರೋಪಿಗಳ ಪೈಕಿ ಪೈಗಂಬರ ರಾಜೇಸಾಬ್ ಕೋಲೂರ ಎಂಬುವವನು ತನ್ನ ಹೆಂಡತಿ ಪರ್ವಿನಳೊಂದಿಗೆ ಯಾಕೂಬ್ ಚಾಂದಬಾಷಾ ಕೋಲೂರ (24) ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಗೊಂಡಿದ್ದ. ಈ ಹಿನ್ನೆಲೆಯಲ್ಲಿ 6 ಲಕ್ಷ ರೂ.ಗೆ ಸುಪಾರಿ ನೀಡಿದ್ದನು. ಯಾಕೂಬ್ ಕೋಲೂರ ಈತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಸುತ್ತಾಡಿಸಿ, ಕೊಲ್ಹಾರದ ಕೃಷ್ಣಾ ನದಿ ಸೇತುವೆ ಬಳಿ ಕುತ್ತಿಗೆಗೆ ವೈರನಿಂದ ಬಿಗಿದು ಕೊಲೆ ಮಾಡಿ, ಬಳಿಕ ಮೃತದೇಹವನ್ನು ಸೇತುವೆ ಮೇಲಿಂದ ನದಿಗೆ ಎಸೆದು, ಪುರಾವೆ ನಾಶ ಮಾಡಿದ್ದಾರೆ ಎಂದು ಹೇಳಿದರು.
ಓದಿ : ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದ; ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡ ಅಣ್ಣ
ಈ ಕುರಿತು ಬಬಲೇಶ್ವರ ಠಾಣೆಯಲ್ಲಿ ಮೃತ ಯುವಕನ ತಂದೆ ಚಾಂದಬಾಷಾ ಕೋಲೂರ 6 ಜನ ಆರೋಪಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆ, 4 ಜನರನ್ನು ಬಂಧಿಸಲಾಗಿದೆ ಎಂದರು. ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಸುಪಾರಿ ಹಣದಲ್ಲಿ ಖರೀದಿ ಮಾಡಿದ್ದ ಬೈಕ್ ಹಾಗೂ ಸುಪಾರಿ ಹಣದಲ್ಲಿ ಉಳಿದ 11,100 ರೂ.ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.