ವಿಜಯಪುರ: ಮದುವೆಯಾಗಿ ಮೂವರು ಮಕ್ಕಳಿದ್ರೂ ಸಹ ಹೈಸ್ಕೂಲು ಹುಡುಗಿಯ ಹಿಂದೆ ಬಿದ್ದಿದ್ದ ವ್ಯಕ್ತಿ ಇದೀಗ ಅತ್ಯಾಚಾರ ಆರೋಪ ಪ್ರಕರಣದಡಿ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?
ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್ ಹೆಚ್ ಗ್ರಾಮದ ನಿವಾಸಿ ದ್ಯಾಮಣ್ಣ ಗುಳಬಾಳ ಬಂಧಿತ ಆರೋಪಿ. ದ್ಯಾಮಣ್ಣ ತನ್ನ ಟಾಟಾ ಏಸ್ ವಾಹನ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಈ ವೇಳೆ ಗ್ರಾಮೀಣ ಭಾಗದಿಂದ ಮುದ್ದೇಬಿಹಾಳಕ್ಕೆ ಬರುತ್ತಿದ್ದ ಹೈಸ್ಕೂಲ್ ಹುಡುಗಿಯೊಬ್ಬಳ ಮೇಲೆ ಕಣ್ಣು ಹಾಕಿದ್ದಾನೆ. ತನ್ನನ್ನು ಪ್ರೀತಿಮಾಡು ಎಂದು ಆಕೆಯ ಮೇಲೆ ಒತ್ತಡ ಹಾಕಿದ್ದನಂತೆ. ಈ ವೇಳೆ ಆಕೆ ನಿರಾಕರಿಸಿದಾಗ ನೀನು ಪ್ರೀತಿಸದೆ ಹೋದ್ರೆ ನಿಮ್ಮ ತಂದೆ ಹಾಗೂ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಆ ಬಾಲಕಿಗೆ ಬೆದರಿಕೆ ಹಾಕಿದ್ದಾನಂತೆ. ಇದರಿಂದ ಹೆದರಿದ ಬಾಲಕಿ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಳು ಎನ್ನಲಾಗ್ತಿದೆ.
ಎರಡು ವರ್ಷ ಕದ್ದು ಮುಚ್ಚಿ ಲವ್:
ಬಳಿಕ ಎರಡು ವರ್ಷಗಳಿಂದ ಹೀಗೆ ಕದ್ದುಮುಚ್ಚಿ ಇವರು ಪ್ರೀತಿ ಮಾಡುತ್ತಿದ್ದರು. ಆದರೆ ಸೆಪ್ಟೆಂಬರ್ 7ರಂದು ಬೆಳಗಿನ ಜಾವ ಬಾಲಕಿ ಬಹಿರ್ದೆಸೆಗೆಂದು ಹೊರಗೆ ಬಂದಿದ್ದ ವೇಳೆ ದ್ಯಾಮಣ್ಣ ಆಕೆಯನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದನಂತೆ. ವಿಷಯ ಗೊತ್ತಾದ ಬಳಿಕ ಬಾಲಕಿಯ ಪೋಷಕರು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಯ ಕಿರುಕುಳದ ಬಗ್ಗೆ ಮನೆಯಲ್ಲಿ ಹೇಳಿದ್ರೆ ಶಾಲೆ ಬಿಡಿಸುತ್ತಾರೆ ಎಂಬ ಕಾರಣಕ್ಕಾಗಿ ಮನೆಯಲ್ಲಿ ಬಾಲಕಿ ವಿಷಯ ತಿಳಿಸದೆ ಮುಚ್ಚಿಟ್ಟಿದ್ದಳು. ಅಪಹರಣವಾದ ಬಳಿಕ ವಿಷಯ ತಿಳಿದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 12ದಿನಗಳ ಬಳಿಕ ದ್ಯಾಮಣ್ಣ ಹಾಗೂ ಬಾಲಕಿಯನ್ನು ಪತ್ತೆಹಚ್ಚಿ ಕರೆತಂದಿದ್ದಾರೆ.
ಈ ವೇಳೆ ಕಿಡ್ನಾಪ್ ಮಾಡಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಅಪ್ರಾಪ್ತ ಬಾಲಕಿ ಮಾಹಿತಿ ನೀಡಿದ್ದರಿಂದ ಆರೋಪಿ ದ್ಯಾಮಣ್ಣನನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗೆ ಅಟ್ಟಿದ್ದಾರೆ
ಬಾಲಕಿಯ ಅಪಹರಣದ ಹಿಂದೆ ದ್ಯಾಮಣ್ಣನ ಎಂಟು ಜನ ಸಂಬಂಧಿಕರ ಕೈವಾಡವಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅವರು ನಮ್ಮ ಮನೆ ಮುಂದೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಕೃತ್ಯದಲ್ಲಿ ಪಾತ್ರವಿರುವ ಎಲ್ಲರನ್ನೂ ಬಂಧಿಸಬೇಕು, ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಬಾಲಕಿಯ ಪೋಷಕರು ಆಗ್ರಹಿಸಿದ್ದಾರೆ.