ಮುದ್ದೇಬಿಹಾಳ: ಭಾರತ ಹಾಗೂ ಚೀನಾ ಗಡಿಯಲ್ಲಿ ವೀರ ಮರಣ ಹೊಂದಿದ ಸೈನಿಕರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ಅಜ್ಮೀರ್ ಸೂಫಿ ಸಂತರಾದ ಹಜರತ್ ಖ್ವಾಜಾ ಮೊಯಿನುದ್ದೀನ ಚಿಸ್ತಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಟಿವಿ ನಿರೂಪಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಹ ಮನವಿ ಸಲ್ಲಿಸಿದರು.
ಇತ್ತೀಚೆಗೆ ಭಾರತ ಚೀನಾ ಗಡಿಯಲ್ಲಿ ವೀರಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಬೇಕು. ಹಾಗೂ ಅವರ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಸಂಘಟನೆಯ ಅಧ್ಯಕ್ಷ ಡಿ.ಎಂ.ಚೌಧರಿ, ವಕೀಲರಾದ ಎನ್.ಬಿ.ಮುದ್ನಾಳ, ಬಿ.ಎಚ್.ಸುತಾರ, ಎ.ಎನ್.ಬೇಲಿಫ ಇನ್ನಿತರರು ಇದ್ದರು.